
ಬೆಂಗಳೂರಿನ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ನೈರುತ್ಯ ರೈಲ್ವೆ ಹೊಸ ಮೊಬೈಲ್ ಟಿಕೆಟ್ ವ್ಯವಸ್ಥೆಯನ್ನು (ಎಂ-ಯುಟಿಎಸ್)ಪರಿಚಯಿಸಿದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರು ಟಿಕೆಟ್ ಕೌಂಟರ್ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಸಿಬ್ಬಂದಿ ಪ್ರಯಾಣಿಕರಿದ್ದ ಸ್ಥಳಕ್ಕೆ ಬಂದು ಟಿಕೆಟ್ಗಳನ್ನು ನೀಡುತ್ತಾರೆ.
ಬೆಂಗಳೂರು: ರೈಲ್ವೆ ಸ್ಟೇಷನ್ ಅಂದರೆ ಮೊದಲಿಗೆ ನೆನಪಾಗುವುದೇ ಟಿಕೆಟ್ ಕೌಂಟರ್. ಅದರಲ್ಲೂ ಹಬ್ಬಗಳ ಸೀಸನ್ ಬಂದರೆ ಸಾಕು, ಹೆಜ್ಜೆ ಹೆಜ್ಜೆಗೂ ಪ್ರಯಾಣಿಕರಿರುತ್ತಾರೆ. ಕ್ಯೂ ಉದ್ದ ಇರುತ್ತದೆ. ಕೆಲವರು ಟಿಕೆಟ್ ಸಿಗದೆ ವಾಪಸ್ ಆಗುವ ಘಟನೆಯೂ ಕೂಡ ನಡೆಯುತ್ತದೆ. ಆದರೆ, ಇದೀಗ ಪ್ರಯಾಣಿಕರ ಸಂಕಷ್ಟ ತಪ್ಪಿಸಲು ನೈರುತ್ಯ ರೈಲ್ವೆ ಹೊಸ ಯೋಜನೆ ಶುರು ಮಾಡುತ್ತಿದೆ.
ಇನ್ಮುಂದೆ ರೈಲ್ವೆ ಪ್ರಯಾಣಿಕರು ಟಿಕೆಟ್ಗಾಗಿ ಕೌಂಟರ್ ಮುಂದೆ ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ಪ್ರಯಾಣಿಕರ ದಟ್ಟಣೆಯ ಸಮಯದಲ್ಲಿ, ಪ್ರಯಾಣಿಕರಿದ್ದ ಜಾಗಕ್ಕೆ ಹೋಗಿ ಟಿಕೆಟ್ ಕೊಡಲು ನೈರುತ್ಯ ರೈಲ್ವೆ ಎಂ-ಯುಟಿಎಸ್ ವ್ಯವಸ್ಥೆ ಪರಿಚಯಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸರ್.ಎಂ.ವಿಶ್ವೇಶರಯ್ಯ ನಿಲ್ದಾಣ, ಯಶವಂತಪುರ ರೈಲು ನಿಲ್ದಾಣಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ.
ಎಂ-ಯುಟಿಎಸ್ ಯಂತ್ರಗಳ ಮೂಲಕ ಕಾಯ್ದಿರಿಸದ ಟಿಕೆಟ್, ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ಪ್ರಯಾಣಿಕರು ನಿಂತಿರುವ ಜಾಗಕ್ಕೆ ಹೋಗಿ ಸಿಬ್ಬಂದಿ ಕೊಡಲಿದ್ದಾರೆ. ನಿಲ್ದಾಣದಿಂದ 500-ಮೀಟರ್ ಅಂತರದಲ್ಲಿ ಎಂ-ಯುಟಿಎಸ್ ಟಿಕೆಟ್ ವಿತರಿಸಲು ಅವಕಾಶವಿದೆ ಎಂದು ನೈರುತ್ಯ ರೈಲ್ವೇ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ತ್ರಿನೇತ್ರ ಕೆಆರ್ ತಿಳಿಸಿದ್ದಾರೆ.




