ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಅವರ ಹೆಸರು ನಾಮಕರಣ: ಕೇಂದ್ರ ಸಚಿವ ವಿ.ಸೋಮಣ್ಣ

ಬೆಂಗಳೂರು: ತುಮಕೂರು ರೈಲು ನಿಲ್ದಾಣಕ್ಕೆ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿದ ಸೋಮಣ್ಣ, 30 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದು, ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಯ ಕುರಿತಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಧಾನಿಗೆ ವಿವರಿಸಿದ್ದಾರೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ, ವರ್ತುಲ ರೈಲ್ವೆ ಇತ್ಯಾದಿಗಳ ಬಗ್ಗೆ ಎರಡು ಸುತ್ತಿನ ಸಭೆ ನಡೆಸಿರುವ ಬಗ್ಗೆ ವಿ.ಸೋಮಣ್ಣ ವಿವರಿಸಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದ ತುಮಕೂರು- ರಾಯದುರ್ಗ ರೈಲ್ವೆ ಮಾರ್ಗ ಭೂಸ್ವಾಧೀನ ಪ್ರಕ್ರಿಯೆಯನ್ನು ಕೇವಲ 3 ತಿಂಗಳ ಅವಧಿಯಲ್ಲಿ ಶೇ.90ಕ್ಕಿಂತಲೂ ಮಿಗಿಲಾಗಿ ಮುಗಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಅಧಿಕಾರಿ ಮತ್ತು ಜಿಲ್ಲಾಡಳಿತದ ಉತ್ತಮ ಕಾರ್ಯವೈಖರಿಯ ಬಗ್ಗೆ ಪ್ರಧಾನಿಗಳು ಅತ್ಯಂತ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಳೆದ 3 ತಿಂಗಳಲ್ಲಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಯಲ್ಲಿ ಪ್ರವಾಸ ಮಾಡಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಾರ್ಯವೈಖರಿ ಪ್ರಧಾನಮಂತ್ರಿಗಳು ಶ್ಲಾಘಿಸಿದ್ದಾರೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.





