ರಾಜಕೀಯ

ವಿಜಯ್​ ದಿವಸ್​ : ಮಡಿದ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ, ರಾಷ್ಟ್ರಪತಿ ಮುರ್ಮು

ನವದೆಹಲಿ :  1971 ರಲ್ಲಿ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೇನೆಯ ವಿಜಯದ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್​ 16 ರಂದು ವಿಜಯ್​ ದಿವಸ್​ ಅನ್ನು ಆಚರಿಸಲಾಗುತ್ತದೆ. ಈ ದಿನದಂದು ಯುದ್ಧದಲ್ಲಿ ಮಡಿದ ಎಲ್ಲಾ ವೀರಯೋಧರಿಗೆ ಭಾರತ ಗೌರವ ಸಲ್ಲಿಸುತ್ತದೆ.

1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ವೀರ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ವಿಜಯ್​​ ದಿವಸ್​​ನ ಸಂದರ್ಭದಲ್ಲಿ ಗೌರವ ಸಲ್ಲಿಸಿದರು. ವೀರ ಯೋಧರ ಶೌರ್ಯ ಮತ್ತು ಸಮರ್ಪಣೆ ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದೆ. ಅವರ ತ್ಯಾಗ ಮತ್ತು ಅಚಲವಾದ ಮನೋಭಾವ ಜನರ ಹೃದಯ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅವರ ಧೈರ್ಯ ಮತ್ತು ಅದಮ್ಯ ಮನೋಭಾವವನ್ನು ದೇಶ ಸ್ಮರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

1971ರ ಯುದ್ಧದ ಸಮಯದಲ್ಲಿ ನಮ್ಮ ಸಶಸ್ತ್ರ ಪಡೆಗಳು ಮಾಡಿದ ನಿಸ್ವಾರ್ಥ ತ್ಯಾಗವನ್ನು ರಾಷ್ಟ್ರ ಕೃತಜ್ಞತೆಯಿಂದ ಸ್ಮರಿಸುತ್ತದೆ. ಅಪ್ರತಿಮ ಧೈರ್ಯವನ್ನು ಪ್ರದರ್ಶಿಸಿದ ಮತ್ತು ಐತಿಹಾಸಿಕ ವಿಜಯವನ್ನು ಸಾಧಿಸಿದ ವೀರಯೋಧರಿಗೆ ವಿಜಯ ದಿವಸ್​ದಂದು ನಾನು ಗೌರವ ಸಲ್ಲಿಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್​ನಲ್ಲಿ ಪೋಸ್ಟ್​  ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button