ರಾಜ್ಯಸುದ್ದಿ

ಬ್ಯಾಂಕ್‌ನಲ್ಲಿ ದುಡ್ಡಿಟ್ರೇ ಕೈಗೆ ಚೊಂಬಾ.! ಮಹಿಳಾ ಜಿಲ್ಲಾಧಿಕಾರಿ ಬೆನ್ನಿಗೆ ರೈತರು ಬಿದ್ದಿದ್ದೇಕೆ ಗೊತ್ತಾ?

ಧಾರವಾಡ: ಮನೆಯಲ್ಲಿದ್ದರೆ ಹಣ ಸೇಪ್ಟಿ ಇಲ್ಲ, ಬಡ್ಡಿ ಸಿಗಲ್ಲ ಅಂತ ನಮ್ಮ ಜನ ಬ್ಯಾಂಕಿನ ಮೊರೆ ಹೋಗ್ತಾರೆ. ಬ್ಯಾಂಕ್‌ನಲ್ಲಿದ್ದರೆ ತಮ್ಮ ಹಣ ಸೇಫ್ಟಿಯಾಗಿರುತ್ತದೆ. ಬಡ್ಡಿ ಸಿಗುತ್ತೆ ಎನ್ನೋ ನಂಬಿಕೆ ಇರುತ್ತೆ. ಆದರೆ, ಗ್ರಾಹಕರಿಗೇ ಗೊತ್ತಿಲ್ಲದಂತೆ ಅವರ ಅಕೌಂಟ್‌ನಲ್ಲಿರುವ ಹಣ ಪದೇ ಪದೇ ನಾಪತ್ತೆ ಆಗುತ್ತಿದೆ. ಇದರಿಂದ ಧಾರವಾಡದಲ್ಲಿ ಜನ ಕಂಗಾಲಾಗಿದ್ದಾರೆ. ಬ್ಯಾಂಕ್ ಖಾತೆಯಲ್ಲಿರುವ ರೈತರ ಹಣ ಡೆಬಿಟ್ ಆಗುತ್ತಿರುವುದರಿಂದ ಇದೀಗ ರೈತರು ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.

ತಮ್ಮ ಪಾಸ್‌ಬುಕ್ ಹಾಗೂ ದೂರಿನ ಪ್ರತಿ ಹಿಡಿದು ನಿಂತಿರುವ ಇವರೆಲ್ಲ ಧಾರವಾಡ ತಾಲೂಕಿನ ಕಲ್ಲೂರು, ಉಪ್ಪಿನ ಬೆಟಗೇರಿ ಗ್ರಾಮಸ್ಥರು. ಸುಮಾರು ಏಳೆಂಟು ಜನ ರೈತರ ಬ್ಯಾಂಕ್ ಖಾತೆಗೆ ಕನ್ನ ಬಿದ್ದಿದ್ದು, ತಮ್ಮ ಹಣ ವಾಪಸ್ ಕೊಡಿಸುವಂತೆ ಇದೀಗ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮಲ್ಲಪ್ಪ ಬುಡರಕಟ್ಟಿ ಎಂಬ ರೈತನ ಖಾತೆಯಿಂದ 23 ಸಾವಿರ, ರುದ್ರಪ್ಪ ಅಂಗಡಿ ಎಂಬ ರೈತನ ಖಾತೆಯಿಂದ 30,000, ರುದ್ರಪ್ಪ ಗುಡ್ಡದಮನಿ ಎಂಬುವವರ ಖಾತೆಯಿಂದ 50,000 ಹಾಗೂ ಬಸಪ್ಪ ವಿಜಾಪುರ ಎಂಬ ರೈತನ ಖಾತೆಯಿಂದ 9,500 ಹಣ ಡೆಬಿಟ್ ಆಗಿದೆ. ಈ ಸಂಬಂಧ ರೈತರು ಸೈಬರ್ ಕ್ರೈಂ, ಬ್ಯಾಂಕ್ ಮ್ಯಾನೇಜರ್ ಹಾಗೂ ಮುಖ್ಯ ಬ್ಯಾಂಕ್ ಶಾಖೆಗೂ ದೂರು ನೀಡಿದ್ದಾರೆ. ಆದರೆ, ಹಣ ಕಳೆದುಕೊಂಡ ರೈತನಿಗೆ ಮಾತ್ರ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇವರಿಗೆ ಇವರ ದುಡ್ಡು ಮಾತ್ರ ಸಿಕ್ಕಿಲ್ಲ.

ಸೈಬರ್ ಠಾಣೆ ಪೊಲೀಸರು, ಬ್ಯಾಂಕ್ ಮ್ಯಾನೇಜರ್‌ಗಳಿಂದಲೂ ಈ ರೈತರಿಗೆ ಯಾವುದೇ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಇದೀಗ ಹಣ ಕಳೆದುಕೊಂಡ ಎಲ್ಲ ರೈತರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ರೈತರಿಗೆ ಆಗಿರುವ ಈ ಅನ್ಯಾಯವನ್ನು ಯಾವ ರೀತಿ ಬಗೆಹರಿಸುತ್ತಾರೋ ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button