
ಕೊಪ್ಪಳ: ಬೇಸಿಗೆ ಕಾಲ ಹಣ್ಣುಗಳ ರಾಜ ಮಾವಿನ ರುಚಿ ಸವಿಯುವ ಸುಸಮಯ. ಈ ಪ್ರಯುಕ್ತ ಕೊಪ್ಪಳದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ 10ನೇ ವರ್ಷದ ಅದ್ಧೂರಿ ‘ಮಾವು ಮೇಳ’ ಆರಂಭವಾಗಿದ್ದು, ಹಣ್ಣುಗಳ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ದುಬಾರಿ ಬೆಲೆಯ ‘ಮಿಯಾಜಾಕಿ’ ಮಾವು ಮೇಳದ ಕೇಂದ್ರ ಬಿಂದು!
ಕೊಪ್ಪಳದಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳ ಮೇಳ ನಡೆಯುತ್ತಿದ್ದು ಬಾಯಲ್ಲಿ ನೀರೂರಿಸುವ ವಿವಿಧ ಬಣ್ಣಗಳಿಂದ ಕೂಡಿದ ಮಾವುಗಳ ರಾಶಿ ಕಣ್ಣಿಗೆ ಹಬ್ಬವೇ ಸರಿ! ಅತ್ಯಂತ ದುಬಾರಿ ಬೆಲೆಯ ಮಿಯಾಜಾಕಿ ಮಾವು ಮಾವು ಮೇಳದ ಪ್ರಮುಖ ಆಕರ್ಷಣೆಯಾಗಿದ್ದು ಪ್ರತಿ ಕೆಜಿಗೆ ರೂ.2.5 ಲಕ್ಷ ಬೆಲೆ ನಿಗದಿಯಾಗಿದೆ. ಈ ಮೇಳದ ಮುಖ್ಯ ಉದ್ದೇಶ ಮಾವು ಬೆಳೆಯನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ರೈತರಿಗೆ ಲಾಭ ಹಾಗೂ ಗ್ರಾಹಕರಿಗೆ ಕಡಿಮೆ ಬೆಲೆಗೆ ಗುಣಮಟ್ಟದ ಹಣ್ಣುಗಳನ್ನು ನೀಡುವುದೇ ಆಗಿದೆ ಎನ್ನಲಾಗಿದೆ.
ಮಾವಿನ ಮೇಳವನ್ನು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅವರು ಈ ಅಧಿಕೃತವಾಗಿ ಉದ್ಘಾಟಿಸಿದರು. ರೈತರು ತಾವು ಬೆಳೆದ ಹಣ್ಣುಗಳನ್ನು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ತೋಟಗಾರಿಕೆ ಇಲಾಖೆ ಈ ವೇದಿಕೆ ಕಲ್ಪಿಸಿದೆ. ಮೇಳದಲ್ಲಿ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಎಲ್ಲೆಡೆ ಹಳದಿ ಬಣ್ಣದ ರಸಭರಿತ ಹಣ್ಣುಗಳ ರಾಶಿ ಕಣ್ಮನ ಸೆಳೆಯುತ್ತಿದೆ.
ಮೇಳದ ಪ್ರಮುಖ ಆಕರ್ಷಣೆಗಳು!
ಮಾವಿನ ಮೇಳ ಮೇ 13ರಂದು ಪ್ರಾರಂಭವಾಗಿದ್ದು ಮೇ 22 ರವರೆಗೆ (ಒಟ್ಟು 10 ದಿನಗಳು) ನಡೆಯಲಿದ್ದು ಗ್ರಾಹಕರು ಈ ಅವಕಾಶವನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.ಜಿಲ್ಲೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆಯುತ್ತಿದ್ದು ಮಾವಿನ ವಿವಿಧ ತಳಿಗಳಾದ ಕೇಸರ್, ಬೇನೆಶಾನ್, ರಸಪುರಿ, ಆಪೋಸ್, ಮಲ್ಲಿಕಾ, ಇಮಾಮ್ ಪಸಂದ್, ದಶಹರಿ ಇತ್ಯಾದಿ ಮಾವು ಲಭ್ಯವಿದೆ. ಇದರೊಂದಿಗೆ ಇತರ ಉತ್ಪನ್ನಗಳಾದ ಮಾವಿನ ಉಪ್ಪಿನಕಾಯಿ ಮತ್ತು ವಿವಿಧ ಮಾವಿನ ಉತ್ಪನ್ನಗಳು ಸಹ ಮಾರಾಟಕ್ಕಿರುವುದು ವಿಶೇಷ.
ಮಿಯಾಜಾಕಿ ಕಮಾಲ್!
ಕಳೆದ ವರ್ಷ ಬೇರೆಡೆಯಿಂದ ಆಮದು ಮಾಡಿಕೊಂಡು ಮಿಯಾಜಾಕಿ ಮಾವನ್ನು ಪ್ರದರ್ಶಿಸಲಾಗಿತ್ತು. ಆದರೆ ಈ ಬಾರಿ ವಿಶೇಷವೆಂದರೆ, ಕೊಪ್ಪಳದ ಸ್ಥಳೀಯ ರೈತರೇ ಈ ದುಬಾರಿ ಮಾವನ್ನು ಬೆಳೆದು ಪ್ರದರ್ಶನಕ್ಕೆ ಇಟ್ಟಿರುವುದು ಎಲ್ಲರ ಕಣ್ಣು ಹುಬ್ಬೇರಿಸುವಂತೆ ಮಾಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 2.5 ಲಕ್ಷ ರೂಪಾಯಿ ಬೆಲೆ ಬಾಳುವ ಈ ಹಣ್ಣನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.
ಈ ಮೇಳ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾರುಕಟ್ಟೆ ದರಕ್ಕಿಂತಲೂ ಉತ್ತಮ ಬೆಲೆಯಲ್ಲಿ,ರಾಸಾಯನಿಕಮುಕ್ತ ನೈಸರ್ಗಿಕವಾಗಿ ಬೆಳೆದ ಮಾವು ಇಲ್ಲಿ ಸಿಗುತ್ತಿದೆ. “ಹೊಸ ಬಗೆಯ ತಳಿಗಳು ಮತ್ತು ಮಾವಿನ ಉತ್ಪನ್ನಗಳು ಒಂದೇ ಸೂರಿನಡಿ ಸಿಗುತ್ತಿರುವುದು ಜಿಲ್ಲೆಯ ಜನರಿಗೆ ಮತ್ತು ರೈತರಿಗೆ ತುಂಬಾ ಅನುಕೂಲಕರವಾಗಿದೆ” ಎಂದು ಗ್ರಾಹಕಿ ಮಧು ಹರ್ಷ ವ್ಯಕ್ತಪಡಿಸಿದ್ದಾರೆ .ಈ ಮೇಳದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ ಮತ್ತು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ರೈತರಿಗೆ ಪ್ರೋತ್ಸಾಹ ನೀಡಿದರು.
:#FreedomTV #KoppalaMangoMela #MangoFestival2026 #MiyazakiMango #MangoKing #KoppalaNews #HorticultureDepartment #SureshItnal #FarmersMarket #KesarMango #KarnatakaAgri #MangoLovers #BreakingNewsKannada #SpecialReport #OrganicMangoes