ಸಿನಿಮಾ

ಹಿರಿಯ ನಟಿ ʻಸಾಹುಕಾರ್‌ʼ ಜಾನಕಿ ಆಸ್ಪತ್ರೆಗೆ ದಾಖಲು!

Veteran actress 'Sahukar' Janaki admitted to hospital!

ಬಹುಭಾಷಾ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್‌ ಜಾನಕಿ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಚೆನ್ನೈನ ಅಲ್ವಾರ್‌ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಅವರಿಗೆ ವೈದ್ಯರ ತಂಡದಿಂದ ಚಿಕಿತ್ಸೆ ನಡೆಯುತ್ತಿದೆ.

ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಸಾಹುಕಾರ್ ಜಾನಕಿ ಅವರು ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.

1950ರಲ್ಲಿ ತೆರೆಕಂಡ ತೆಲುಗಿನ ‘ಸಾಹುಕಾರ್’ ಸಿನಿಮಾ ಇವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಈ ಚಿತ್ರದ ಯಶಸ್ಸಿನ ನಂತರವೇ ಅವರ ಹೆಸರಿನೊಂದಿಗೆ ‘ಸಾಹುಕಾರ್’ ಎಂಬ ಬಿರುದು ಶಾಶ್ವತವಾಯಿತು.

1954ರಲ್ಲಿ ಬಿಡುಗಡೆಯಾದ ‘ದೇವಕನ್ನಿಕಾ’ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಗೌರಿ, ಭಾಗ್ಯ ಚಕ್ರ, ಕನ್ಯಾರತ್ನ, ರತ್ನಗಿರಿ ರಹಸ್ಯ, ‘ಶಬ್ದವೇಧಿ’ ಮುಂತಾದ ಜನಪ್ರಿಯ ಕನ್ನಡ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.

ಕೇವಲ ಬೆಳ್ಳಿಪರದೆಗೆ ಮಾತ್ರ ಸೀಮಿತವಾಗದೆ, ಕಿರುತೆರೆಯಲ್ಲೂ ತಮ್ಮ ಅಭಿನಯದ ಮೂಲಕ ಸೈ ಎನಿಸಿಕೊಂಡವರು ಸಾಹುಕಾರ್ ಜಾನಕಿ. 1991ರಲ್ಲಿ ಕಿರುತೆರೆ ಪ್ರವೇಶಿಸಿದ ಇವರು, ಖ್ಯಾತ ನಿರ್ದೇಶಕಿ ಸುಹಾಸಿನಿ ಮಣಿರತ್ನಂ ನಿರ್ದೇಶನದ ಜನಪ್ರಿಯ ‘ಪೆನ್’ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದರು.

Comments (0)

Your email address will not be published. Required fields are marked *

Back to top button