
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಹಾಗೂ ಟೀಸರ್‌ಗಳು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.
ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಯಶ್ ಅವರ ಮಾಸ್ ಎಂಟ್ರಿ, ಅತಿಯಾದ ರಕ್ತಪಾತ ಹಾಗೂ ವೈಲೆನ್ಸ್ ಸಿನಿಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿತ್ತು. ಆಕ್ಷನ್ ಪ್ರಿಯರಿಗೆ ಈ ಸಿನಿಮಾ ರಕ್ತಸಿಕ್ತ ರೌದ್ರಾವತಾರದ ರಂಗು ಹಚ್ಚಲಿದೆ ಎಂಬುದು ಟೀಸರ್‌ನಿಂದಲೇ ಸ್ಪಷ್ಟವಾಗಿತ್ತು. ಇದೀಗ ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ಕೂಡ ಅದೇ ಮಟ್ಟದ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ರಾಯ ಮತ್ತು ಟಿಕೆಟ್ ಎಂಬ ಎರಡು ಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಎರಡೂ ಪಾತ್ರಗಳ ಪರಿಚಯಾತ್ಮಕ ಟೀಸರ್‌ಗಳು ಬಿಡುಗಡೆಯಾಗಿದ್ದು, ಇದೀಗ ಚಿತ್ರತಂಡ ಯಶ್ ಅವರ ‘ರಾಯ’ ಪಾತ್ರದ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.
ಈ ಪೋಸ್ಟರ್‌ನಲ್ಲಿ ಯಶ್ ವಿಭಿನ್ನವಾದ ಹಾಗೂ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೆರೂನ್ ಬಣ್ಣದ ಜಾಕೆಟ್ ಧರಿಸಿ, ಕೈಯಲ್ಲಿ ರಕ್ತಸಿಕ್ತ ಬೆರಳುಗಳೊಂದಿಗೆ, ತುಂಟ ಹಾಗೂ ಗೆಲುವಿನ ನಗೆ ಬೀರುತ್ತಾ ಸಿಗರೇಟಿಗೆ ಬೆಂಕಿ ಹಚ್ಚುತ್ತಿರುವ ಯಶ್ ಅವರ ಈ ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.




