Forest

ಸಫಾರಿಯಲ್ಲಿ ತೆರೆದ ವಾಹನ ನಿಷಿದ್ಧ-ಈಶ್ವರ ಖಂಡ್ರೆ !

Only secured buses no open vehicles in forest safari ordered Eshwar Khandre

ಬೆಂಗಳೂರು: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ದಾರುಣ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಅರಣ್ಯ ಇಲಾಖೆ, ಪ್ರವಾಸಿಗರ ಸುರಕ್ಷತೆಯ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿಧಾಮಗಳಲ್ಲಿ ಇನ್ನು ಮುಂದೆ ತೆರೆದ ವಾಹನಗಳ ಸಫಾರಿಗೆ ನಿರ್ಬಂಧ ವಿಧಿಸಲಾಗಿದೆ. ಬಹುತೇಕವಾಗಿ ಬಸ್‌ಗಳನ್ನು ಬಳಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.

ದುಬಾರೆ ದುರಂತ- ನಿದ್ದೆಯಿಂದ ಎದ್ದ ಅರಣ್ಯ ಇಲಾಖೆ!


ದುಬಾರೆ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಆನೆಯ ಕೆಳಗೆ ಸಿಲುಕಿ ಮೃತಪಟ್ಟ ಆಘಾತಕಾರಿ ಘಟನೆ ನಡೆದಿತ್ತು.ಈ ದುರಂತದ ಬೆನ್ನಲ್ಲೇ ಖಂಡ್ರೆಯವರು ಮೈಕೊಡವಿಕೊಂಡು ನಿಂತಿದ್ದಾರೆ. ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಕಠಿಣ ನಿರ್ದೇಶನ ನೀಡಿದ್ದಾರೆ.

ರಾಜ್ಯದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಮಲೆ ಮಹದೇಶ್ವರ ಬೆಟ್ಟ ದಾಂಡೇಲಿ, ಕೆ.ಗುಡಿ ಸೇರಿದಂತೆ ಹಲವೆಡೆ ಸಫಾರಿಗಳು ನಡೆಯುತ್ತಿದ್ದು,ದೇಶ-ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅದೃಷ್ಟವಶಾತ್ ಈವರೆಗೆ ಸಫಾರಿ ವೇಳೆ ವನ್ಯಮೃಗಗಳು ದಾಳಿ ಮಾಡಿದ ಘಟನೆಗಳು ಸಂಭವಿಸಿಲ್ಲ. ಆದರೂ ಯಾವುದೇ ದೊಡ್ಡ ಅನಾಹುತಗಳು ಸಂಭವಿಸಬಾರದೆಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅರಣ್ಯ ಸಚಿವರ ಮಾರ್ಗಸೂಚಿಗಳು!
ಸಫಾರಿಗೆ ಮುಚ್ಚಿದ ಮತ್ತು ಸಂಪೂರ್ಣ ಸುರಕ್ಷಿತವಾದ ಬಸ್‌ಗಳನ್ನು ಹೆಚ್ಚಾಗಿ ಬಳಸಬೇಕು.ಹಾಲಿಯಿರುವ ಜೀಪ್‌ಗಳಿಗೆ ಸದ್ಯ ಬಳಕೆಯಲ್ಲಿರುವ ತೆರೆದ ಕ್ಯಾಂಪರ್/ಜೀಪ್‌ಗಳಿಗೆ ಕಡ್ಡಾಯವಾಗಿ ಕಬ್ಬಿಣದ ಸರಳುಗಳ ಜಾಲರಿ ಅಥವಾ ಗಟ್ಟಿಮುಟ್ಟಾದ ಗಾಜು ಅಳವಡಿಸಬೇಕು. ಸಫಾರಿ ವೇಳೆ ಯಾವುದೇ ಪ್ರವಾಸಿಗರು ವಾಹನದಿಂದ ಕಾಡಿನಲ್ಲಿ ಇಳಿಯುವುದು ನಿಷಿದ್ಧ. ಪ್ರತಿ ಸಫಾರಿ ವಾಹನದಲ್ಲೂ ಕಡ್ಡಾಯವಾಗಿ ಪ್ರಥಮ ಚಿಕಿತ್ಸಾ ಕಿಟ್ ಇರಬೇಕು ಹಾಗೂ ಸಫಾರಿ ಕೇಂದ್ರಗಳ ಸಮೀಪದಲ್ಲೇ ಸದಾ ಆಂಬ್ಯುಲೆನ್ಸ್ ವಾಹನ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಸಾಕಾನೆ ಶಿಬಿರಗಳಿಗೂ ಹೊಸ ವಿಧಾನ
ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ರೂಪಿಸಲು ಸಚಿವರು ಆದೇಶಿಸಿದ್ದಾರೆ. ಇದರ ಪ್ರಕಾರ, ಇನ್ಮುಂದೆ ಪ್ರವಾಸಿಗರು ಆನೆಗಳ ಸಮೀಪ ಸುಳಿಯುವಂತಿಲ್ಲ. ಕನಿಷ್ಠ 100 ಅಡಿ ದೂರದಲ್ಲಿ ನಿಂತೇ ಆನೆಗಳ ಸ್ನಾನ ಹಾಗೂ ಇತರ ಚಟುವಟಿಕೆಗಳನ್ನು ವೀಕ್ಷಿಸಲು ಅವಕಾಶ ನೀಡಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.ಪ್ರವಾಸಿಗರ ವನ್ಯಜೀವಿ ವೀಕ್ಷಣೆಯ ಉತ್ಸಾಹಕ್ಕೆ ಭಂಗ ಬಾರದಂತೆ, ಅವರ ಜೀವ ರಕ್ಷಣೆಗೆ ಗರಿಷ್ಠ ಆದ್ಯತೆ ನೀಡಲು ಅರಣ್ಯ ಇಲಾಖೆ ಈ ಮಹತ್ವದ ಕ್ರಾಂತಿಕಾರಿ ಕ್ರಮಕ್ಕೆ ಮುಂದಾಗಿದೆ.

#EshwarKhandre #ForestDepartment #WildlifeSafari #KarnatakaTourism #Bandipur #Nagarahole #OpenSafariBan #DubareElephantCamp #TouristsSafety #ForestMinistry #KarnatakaNews #FreedomTV #BreakingNews

Comments (0)

Your email address will not be published. Required fields are marked *

Back to top button