chamarajnagar

ಬಿರುಗಾಳಿ ಮಳೆ, ಕೋಟಿ ಬೆಲೆ, ಬಾಳೆ ನಾಶ-ಸಾಲದ ಸುಳಿಗೆ ರೈತರು!

Banana Crop ruined by Heavy rainin Chamarajanagar

ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆ ಇಲ್ಲಿನ ರೈತರ ಬದುಕನ್ನು ಸಂಪೂರ್ಣವಾಗಿ ಬೀದಿಗೆ ತಂದು ನಿಲ್ಲಿಸಿದೆ. ಕಟಾವಿಗೆ ಬಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ಒಂದೇ ರಾತ್ರಿಗೆ ನೆಲಸಮವಾಗಿದ್ದು, ಪ್ರಕೃತಿಯ ಮುನಿಸಿಗೆ ಅನ್ನದಾತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇದರಿಂದ ಸಾಲದ ಸುಳಿಗೆ ಸಿಲುಕಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

75 ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಸಮ!


ಚಾಮರಾಜನಗರ ತಾಲೂಕಿನ ದೇಶವಳ್ಳಿ, ಹೆಗ್ಗವಾಡಿಪುರ, ಬಸವಟ್ಟಿ, ಕಾವುದವಾಡಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಕಟಾವಿಗೆ ಸಿದ್ಧವಾಗಿ ನಿಂತಿದ್ದ ಸುಮಾರು 75 ಸಾವಿರಕ್ಕೂ ಅಧಿಕ ಗೊನೆ ಸಹಿತ ಬಾಳೆಕಟ್ಟೆಗಳು ಬಿರುಗಾಳಿಯ ರಭಸಕ್ಕೆ ಮುರಿದು ಬಿದ್ದಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ರೈತರು ಶ್ರಮಪಟ್ಟು ಬೆಳೆದಿದ್ದ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಬಾಳೆ ಬೆಳೆ ಸಂಪೂರ್ಣ ಮಣ್ಣುಪಾಲಾಗಿದೆ.

ಚಿನ್ನ ಅಡವಿಟ್ಟು ಸಾಲ- ಕಣ್ಣೀರಲ್ಲಿ ಅನ್ನದಾತರು!
ಇಲ್ಲಿನ ಬಹುತೇಕ ರೈತರು ತಮ್ಮ ಮನೆಯಲ್ಲಿದ್ದ ಹೆಣ್ಣುಮಕ್ಕಳ ಚಿನ್ನಾಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು, ಇನ್ನು ಕೆಲವರು ಬಡ್ಡಿಗೆ ಸಾಲ-ಸೋಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬಾಳೆ ಬೆಳೆದಿದ್ದರು. ವರ್ಷವಿಡೀ ಹಗಲಿರುಳು ಬೆವರು ಸುರಿಸಿ ಮಗುವಿನಂತೆ ಸಾಕಿ ಸಲಹಿದ್ದ ಬೆಳೆ ಇನ್ನೇನು ಕೈಗೆ ಬರುವಷ್ಟರಲ್ಲಿ ಮಳೆರಾನಯ ರೂಪದಲ್ಲಿ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ನಾಶವಾಗಿದೆ. ಈ ನಾಶ ರೈತರ ಕನಸುಗಳಿಗೂ ಕೊಳ್ಳಿ ಇಟ್ಟಿದೆ.ಕೈಗೆ ಬಂದ ತುತ್ತು ಬಾಯಿಗಿಲ್ಲವಲ್ಲಾ ಎನ್ನುವ ದೃಶ್ಯಗಳು ದಿಗಿಲು ಮೂಡಿಸುತ್ತವೆ. ಮುಂದಿನ ದಿನಗಳಲ್ಲಿ ಸಾಲ ತೀರಿಸುವುದು ಹೇಗೆ? ತುತ್ತು ಅನ್ನಕ್ಕೂ ಏನು ಮಾಡುವುದು ಎಂದು ದಿಕ್ಕುತೋಚದಂತಾಗಿರುವ ರೈತರು, “ನಮಗೆ ಈಗ ಆತ್ಮಹತ್ಯೆಯೊಂದೇ ದಾರಿಯಾಗಿ ಉಳಿದಿದೆ” ಎಂದು ಕಣ್ಣೀರಿಡುತ್ತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೈಯಾರೆ ಬಾಳೆ ನಾಶ ಮಾಡುತ್ತಿರುವ ರೈತರು
ನೆಲಕಚ್ಚಿರುವ ಬಾಳೆ ಗಿಡಗಳನ್ನು ನೋಡಲಾಗದೆ ಮನನೊಂದ ರೈತರು, ತಮ್ಮ ತೋಟಗಳಲ್ಲಿ ಗೊನೆ ಸಹಿತ ಬಿದ್ದಿರುವ ಗಿಡಗಳನ್ನು ತಾವೇ ಕೈಯಾರೆ ಕತ್ತರಿಸಿ ಹಾಕುತ್ತಿದ್ದಾರೆ.ಮುಂದಿನ ಬೆಳೆಗೆ ಭೂಮಿ ಸಿದ್ಧಪಡಿಸಬೇಕಾದ ಅನಿವಾರ್ಯತೆ ಮತ್ತು ಕಣ್ಣೆದುರೇ ಒಣಗುತ್ತಿರುವ ಬೆಳೆ ತಂದಿರುವ ಮಾನಸಿಕ ಹಿಂಸೆಯನ್ನು ತಡೆಯಲಾಗದೆ ಅನ್ನದಾತರು ಕೊಡಲಿ ಹಿಡಿದು ಬಾಳೆ ಗಿಡಗಳನ್ನು ಕೊಚ್ಚಿ ಹಾಕುತ್ತಿರುವುದು ಎದೆ ಕರಗಿಸುವಂತಿದೆ.

ಅಧಿಕಾರಿಗಳ ನಡೆಗೆ ಆಕ್ರೋಶ; ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ
ದುರಂತ ಸಂಭವಿಸಿ ಎರಡು ದಿನಗಳು ಕಳೆದರೂ ಜಿಲ್ಲೆಯ ಯಾವುದೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಕೆಳಹಂತದ ಅಧಿಕಾರಿಗಳು ಬಂದು ಕಾಟಾಚಾರದ ಪರಿಶೀಲನೆ ನಡೆಸಿ ಹೋಗುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.“ಸರ್ಕಾರ ನೀಡುವ ಅರೆಕಾಸಿನ ಪರಿಹಾರ ನಮಗೆ ಬೇಡ. ಹೆಕ್ಟೇರ್ ಆಧಾರದ ಮೇಲೆ ನಷ್ಟದ ಅಸಲಿ ಮೌಲ್ಯವನ್ನು ಲೆಕ್ಕ ಹಾಕಿ,ತಕ್ಷಣವೇ ‘ವೈಜ್ಞಾನಿಕ ಬೆಳೆ ನಷ್ಟ ಪರಿಹಾರ’ ಘೋಷಿಸಬೇಕು” ಎಂದು ನೊಂದ ರೈತರು ಸರ್ಕಾರಕ್ಕೆ ಬಲವಾಗಿ ಆಗ್ರಹಿಸಿದ್ದಾರೆ.

#ChamarajanagarRain #BananaCropLoss #FarmersDistress #CropDamage #KarnatakaAgriculture #HeavyRains #FarmersCrisis #ScientificCompensation #ChamarajanagarNews #KarnatakaGovernment #FreedomTV #BreakingNews

Comments (0)

Your email address will not be published. Required fields are marked *

Back to top button