mangalore

ಕರಾವಳಿಯಲ್ಲಿ ತಾರಕಕ್ಕೇರಿದ ನೀರಿನ ಬವಣೆ: ತುಂಬೆ ನೀರಿನ ಮಟ್ಟ ಭಾರಿ ಇಳಿಕೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ತೀವ್ರಗೊಳ್ಳುತ್ತಿದ್ದು, ಮಂಗಳೂರು ನಗರದ ಜೀವನಾಡಿ ಎಂದೇ ಕರೆಯಲ್ಪಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಪ್ರಸ್ತುತ ಡ್ಯಾಂನಲ್ಲಿ ನೀರಿನ ಮಟ್ಟ 4.47 ಮೀಟರ್‌ಗೆ ಇಳಿಕೆಯಾಗಿದ್ದು, ಇದು ಕಳೆದ ಏಳು ವರ್ಷಗಳಲ್ಲೇ ದಾಖಲಾದ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಮಾರ್ಚ್ ತಿಂಗಳ ಅಂತ್ಯಕ್ಕೇ ನದಿಯ ಒಳಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಈ ಆತಂಕಕ್ಕೆ ಕಾರಣವಾಗಿದ್ದು, ನಗರಕ್ಕೆ ಎದುರಾಗಿರುವ ಜಲಕ್ಷಾಮದ ಮುನ್ಸೂಚನೆಯನ್ನು ನೀಡುತ್ತಿದೆ.

ಕಳೆದ ವರ್ಷದ ಮಳೆ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ತೀರಾ ಕಡಿಮೆಯಾಗಿದೆ. 2025ರ ಏಪ್ರಿಲ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಸುರಿದಿದ್ದ ಉತ್ತಮ ಮಳೆಯಿಂದಾಗಿ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5.35 ಮೀಟರ್ ಇತ್ತು. ಆದರೆ, ಈ ವರ್ಷ ಕೇವಲ 41.2 ಮಿ.ಮೀ ಮಳೆಯಾಗಿರುವುದರಿಂದ ನದಿಯಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಇಳಿಮುಖವಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಮಂಗಳೂರು ಮಹಾನಗರ ಪಾಲಿಕೆಯು ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಮೇ 1ರಿಂದ ನಗರದಾದ್ಯಂತ ನೀರಿನ ರೇಷನಿಂಗ್ ಜಾರಿಗೊಳಿಸಲು ನಿರ್ಧರಿಸಿದೆ.

ಪಾಲಿಕೆಯ ಹೊಸ ಆದೇಶದ ಪ್ರಕಾರ, ಇನ್ಮುಂದೆ ಮಂಗಳೂರು ನಗರಕ್ಕೆ ದಿನ ಬಿಟ್ಟು ದಿನ ನೀರು ಪೂರೈಕೆ ಮಾಡಲಾಗುತ್ತದೆ. ಒಳಹರಿವು ಇಲ್ಲದ ಕಾರಣ ಇರುವ ನೀರನ್ನೇ ಮಳೆ ಬರುವವರೆಗೆ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ನಗರದ ಜನತೆ ನೀರನ್ನು ಮಿತವಾಗಿ ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದು, ವರುಣನ ಕೃಪೆಗಾಗಿ ಕಾದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನ ಬೇಗೆಯ ನಡುವೆ ಈ ನೀರಿನ ರೇಷನಿಂಗ್ ಮಂಗಳೂರಿಗರಿಗೆ ದೊಡ್ಡ ಮಟ್ಟದ ಹೊರೆಯಾಗುವ ಸಾಧ್ಯತೆ ಇದೆ.

Comments (0)

Your email address will not be published. Required fields are marked *

Back to top button