BSY ಅಭಿಮಾನೋತ್ಸವಕ್ಕೆ ಭರ್ಜರಿ ತಯಾರಿ… ದುರ್ಗದಲ್ಲಿ ಭೂಮಿ ಪೂಜೆ

ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಕರ್ನಾಟಕದ ಬಿಜೆಪಿ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸಾರ್ಥಕ ರಾಜಕೀಯ ಜೀವನದ ನೆನಪಿಗಾಗಿ ಚಿತ್ರದುರ್ಗದಲ್ಲಿ ಬೃಹತ್ ‘ಅಭಿಮಾನೋತ್ಸವ’ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಈಗಿನಿಂದಲೇ ಕೇಸರಿ ಕಹಳೆ ಮೊಳಗಿಸಿದೆ. ಮೇ. 9ರಂದು ಕೋಟೆನಾಡು ಚಿತ್ರದುರ್ಗದಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಇಂದು ವಿಜೃಂಭಣೆಯಿಂದ ಭೂಮಿ ಪೂಜೆ ನೆರವೇರಿಸಲಾಯಿತು. ನಗರದ ಮಾದಾರ ಚನ್ನಯ್ಯ ಗುರುಪೀಠದ ಹಿಂಭಾಗದಲ್ಲಿರುವ ಬೃಹತ್ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಗಣ್ಯರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಸಿದ್ಧತೆಗಳಿಗೆ ಅಧಿಕೃತ ಚಾಲನೆ ನೀಡಿದರು.
ಧ್ವಜ ಪೂಜೆ ಮತ್ತು ಗೋ ಪೂಜೆಯಂತಹ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಆರಂಭವಾದ ಈ ಕಾರ್ಯಕ್ರಮವು ಚಿತ್ರದುರ್ಗದ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯಕ್ಕೆ ಸಾಕ್ಷಿಯಾಯಿತು. ಮಾದಾರ ಚನ್ನಯ್ಯ ಶ್ರೀಗಳು, ಕಬೀರಾನಂದ ಶ್ರೀಗಳು ಹಾಗೂ ಯಾದವಾನಂದ ಶ್ರೀಗಳು ಸೇರಿದಂತೆ ಹಲವು ಪರಮಪೂಜ್ಯರು ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಿಎಸ್ವೈ ಅವರ ಸುದೀರ್ಘ ರಾಜಕೀಯ ಪಯಣದ ಗೌರವಾರ್ಥ ನಡೆಯುತ್ತಿರುವ ಈ ಸಮಾವೇಶವು ರಾಜ್ಯ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದ್ದು, ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸುವ ಮೂಲಕ ರಾಷ್ಟ್ರೀಯ ನಾಯಕರ ಗಮನ ಸೆಳೆಯಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ.
ಈ ಮಹತ್ವದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯದ ಘಟಾನುಘಟಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಬಿ.ವೈ.ವಿಜಯೇಂದ್ರ ಅವರೊಂದಿಗೆ ಮಾಜಿ ಸಚಿವ ಬಿ. ಶ್ರೀರಾಮುಲು, ಸಂಸದ ಗೋವಿಂದ ಕಾರಜೋಳ, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು. ಅಲ್ಲದೆ ಶಾಸಕ ಎಂ. ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ಮಾಜಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ಹತ್ತಾರು ಪ್ರಮುಖ ನಾಯಕರು ಹಾಜರಿದ್ದು, ಬಿಎಸ್ ವೈ ಅವರ ಅಭಿಮಾನೋತ್ಸವವನ್ನು ಅಭೂತಪೂರ್ವ ಯಶಸ್ವಿಗೊಳಿಸಲು ಪಣತೊಟ್ಟರು.




