
ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ (KD) ಸಿನಿಮಾಗೆ ಅಡೆತಡೆಗಳು ಬೆನ್ನಬಿಡದಂತೆ ಕಾಡುತ್ತಿವೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಬಿಡುಗಡೆಯಾಗಿದ್ದ ಸಿನಿಮಾದ ಟ್ರೇಲರ್ ಯೂಟ್ಯೂಬ್‌ನಿಂದ ದಿಢೀರ್ ಮಾಯವಾಗುವ ಮೂಲಕ ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ. ‘ಶೋಕಿವಾಲ’ನ ಅಬ್ಬರದ ಎಂಟ್ರಿ ನೋಡಲು ಕಾಯುತ್ತಿದ್ದ ಫ್ಯಾನ್ಸ್, ಟ್ರೇಲರ್ ಕಾಣದಿದ್ದಾಗ ಸಿನಿಮಾಕ್ಕೆ ದೃಷ್ಟಿ ಬಿತ್ತಾ ಅಥವಾ ತಾಂತ್ರಿಕ ದೋಷವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಆದರೆ, ಈ ದಿಢೀರ್ ಕಣ್ಮರೆಯ ಹಿಂದೆ ಗಂಭೀರವಾದ ಕಾರಣವೊಂದು ಇರುವುದು ಈಗ ಬಹಿರಂಗವಾಗಿದೆ.

ಯೂಟ್ಯೂಬ್‌ನಿಂದ ಟ್ರೇಲರ್ ಡಿಲೀಟ್ ಆಗಲು ಮುಖ್ಯ ಕಾರಣ ಸೆನ್ಸಾರ್ ಆಗದ ದೃಶ್ಯಗಳ ಅಚಾತುರ್ಯ ಎನ್ನಲಾಗಿದೆ. ಟ್ರೇಲರ್‌ನಲ್ಲಿ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆಯದ ಅಥವಾ ಕತ್ತರಿ ಪ್ರಯೋಗಕ್ಕೆ ಒಳಗಾಗಬೇಕಿದ್ದ ಕೆಲವು ದೃಶ್ಯಗಳು ಅಜಾಗರೂಕತೆಯಿಂದ ಸೇರ್ಪಡೆಯಾಗಿದ್ದವು. ಈ ತಾಂತ್ರಿಕ ತಪ್ಪನ್ನು ಗಮನಿಸಿದ ಯೂಟ್ಯೂಬ್ ಸಂಸ್ಥೆ ವಿಡಿಯೋವನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿತ್ತು. ಈ ಅಚಾತುರ್ಯವನ್ನು ತಕ್ಷಣವೇ ಮನಗಂಡ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ಈ ಲೋಪಕ್ಕಾಗಿ ಅಧಿಕೃತವಾಗಿ ಕ್ಷಮೆಯಾಚಿಸಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಚಿತ್ರತಂಡವು ವಿಡಿಯೋವನ್ನು ಪರಿಷ್ಕರಿಸಿ, ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಿದ ನಂತರ ಏಳು ಗಂಟೆಗಳ ಹಿಂದಷ್ಟೇ ಪರಿಷ್ಕೃತ ಟ್ರೇಲರ್ ಅನ್ನು ಪುನಃ ಅಪ್‌ಲೋಡ್ ಮಾಡಿದೆ. ಸದ್ಯ ಯೂಟ್ಯೂಬ್‌ನಲ್ಲಿ ಹೊಸ ಟ್ರೇಲರ್ ಹವಾ ಎಬ್ಬಿಸುತ್ತಿದ್ದರೂ, ಈ ವಿಘ್ನಗಳಿಂದಾಗಿ ಸಿನಿಮಾದ ಬಿಡುಗಡೆಯ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆ ಶುರುವಾಗಿದೆ. ಪೂರ್ವನಿಗದಿಯಂತೆ ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರುತ್ತದೆಯೇ ಅಥವಾ ಬಿಡುಗಡೆ ದಿನಾಂಕದಲ್ಲಿ ಏನಾದರೂ ಬದಲಾವಣೆ ಆಗಲಿದೆಯೇ ಎಂಬ ಕುತೂಹಲ ಈಗ ಗಾಂಧಿನಗರದಾದ್ಯಂತ ಮನೆಮಾಡಿದೆ.




