chitradurgaರಾಜ್ಯಸುದ್ದಿ

ಬಗೆದಷ್ಟೂ ಬಯಲಾಗ್ತಿದೆ ಮರಳು ಅಕ್ರಮ..!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಯು ಬಗೆದಷ್ಟೂ ಬಯಲಾಗುತ್ತಿದ್ದು, ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮರಳು ನುಗ್ಗಿಸುವ ಮೂಲಕ ಸರ್ಕಾರದ ಖಜಾನೆಗೆ ಕೋಟಿ ಕೋಟಿ ರೂಪಾಯಿ ಕನ್ನ ಹಾಕಲಾಗುತ್ತಿದೆ. ಜಿಲ್ಲೆಯ ಪರಂಪರ-ಚಳ್ಳಕೆರೆ ಮಾರ್ಗವು ಈ ಅಕ್ರಮ ಸಾಗಾಟದ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದ್ದು, ದಂಧೆಕೋರರು ನಕಲಿ ರಾಯಲ್ಟಿ ಸ್ಲಿಪ್‌ಗಳನ್ನು ಸೃಷ್ಟಿಸಿ ರಾಜ್ಯದ ತೆರಿಗೆಯನ್ನು ಲೂಟಿ ಮಾಡುತ್ತಿದ್ದಾರೆ. ಕಳೆದ ಮಾರ್ಚ್ 29 ರಂದು ಜಿಲ್ಲಾಧಿಕಾರಿಗಳು ಮರಳು ಕೇಂದ್ರಗಳ ಮೇಲೆ ದಾಳಿ ನಡೆಸಿ ಅಕ್ರಮಕ್ಕೆ ಒಂದು ತಿಂಗಳ ಕಾಲ ಬ್ರೇಕ್ ಹಾಕಿದ್ದರೂ, ಈಗ ಮತ್ತೆ ರಾಜಾರೋಷವಾಗಿ ದಂಧೆ ಶುರುವಾಗಿದೆ. ಆಂಧ್ರದಿಂದ ಕೇವಲ 200 ರೂಪಾಯಿಗೆ ಪ್ರತಿ ಟನ್ ಮರಳು ತಂದು ಇಲ್ಲಿನ ಮಾರುಕಟ್ಟೆಯಲ್ಲಿ 1500 ರೂಪಾಯಿವರೆಗೆ ಮಾರಾಟ ಮಾಡುವ ಮೂಲಕ ಏಳು ಪಟ್ಟು ಲಾಭ ಮಾಡಿಕೊಳ್ಳಲಾಗುತ್ತಿದೆ. ಈ ದಂಧೆಯ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆಯಿದ್ದು, ಗಡಿ ಭಾಗದ ಚೆಕ್ ಪೋಸ್ಟ್‌ಗಳು ದಿಢೀರ್ ಮಾಯವಾಗಿರುವುದು ಮತ್ತು ಪೊಲೀಸ್ ಇಲಾಖೆಯ ಮೌನವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಬೃಹತ್ ಹಗರಣದಿಂದಾಗಿ ಸರ್ಕಾರಕ್ಕೆ ಬರಬೇಕಾದ ಸಾವಿರಾರು ರೂಪಾಯಿಗಳ ರಾಯಲ್ಟಿ ಸೋರಿಕೆಯಾಗುತ್ತಿದ್ದರೂ ಗಣಿ ಇಲಾಖೆ ಅಧಿಕಾರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಲಾರಿ ಮಾಲೀಕರು ಮತ್ತು ಮಧ್ಯವರ್ತಿಗಳು ಸೇರಿಕೊಂಡು ನಡೆಸುತ್ತಿರುವ ಈ ದಂಧೆಯನ್ನು ತಡೆಯಲು ಅಧಿಕಾರಿಗಳು ವಿಫಲರಾಗಿದ್ದು, ಜಿಲ್ಲಾಡಳಿತದ ಮೌನದ ವಿರುದ್ಧ ಜನತೆ ಬಳ್ಳಾರಿ ಮಾದರಿಯ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಕೂಡಲೇ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಪುನಃ ಸ್ಥಾಪಿಸಿ, ಅಕ್ರಮ ಮರಳು ಸಾಗಾಟದಲ್ಲಿ ಭಾಗಿಯಾಗಿರುವ ಲಾರಿ ಮಾಲೀಕರು ಹಾಗೂ ಅವರಿಗೆ ಸಾಥ್ ನೀಡುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೋಟಿ ಕೋಟಿ ರೂಪಾಯಿ ಸಾರ್ವಜನಿಕ ಹಣ ಲೂಟಿಯಾಗುತ್ತಿರುವ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕಿದೆ.

Comments (0)

Your email address will not be published. Required fields are marked *

Back to top button