
ಬೆಂಗಳೂರು: ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ (ಏಪ್ರಿಲ್ 1) ಹೊಸ ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ಬರುತ್ತಿದ್ದು, ನಿಯಮ ಉಲ್ಲಂಘಿಸುವ ನಾಗರಿಕರ ವಿರುದ್ಧ ಬೃಹತ್ ಬೆಂಗಳೂರು ಪ್ರಾಧಿಕಾರ ದಂಡಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ದೇಶಾದ್ಯಂತ ಏಕರೂಪದ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಸಿಲಿಕಾನ್ ಸಿಟಿಯ ನಿವಾಸಿಗಳು ಇನ್ನು ಮುಂದೆ ಕಡ್ಡಾಯವಾಗಿ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಕಸವನ್ನು ವಿಂಗಡಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಹಸಿಕಸ, ಒಣಕಸ, ಸ್ಥಳೀಯ ನೈರ್ಮಲ್ಯ ಕಸ ಮತ್ತು ವಿಶೇಷ ತ್ಯಾಜ್ಯ ಕಸ ಎಂಬ ನಾಲ್ಕು ಮಾದರಿಗಳಲ್ಲಿ ವಿಂಗಡಣೆ ಮಾಡಿದ ತ್ಯಾಜ್ಯವನ್ನು ಮಾತ್ರ ಪಾಲಿಕೆಯ ಕಸ ಸಂಗ್ರಹಣಾ ಆಟೋಗಳಿಗೆ ನೀಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಒಂದು ವೇಳೆ ನಾಗರಿಕರು ಕಸ ವಿಂಗಡಣೆ ಮಾಡದೆ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ; ಮೊದಲ ಬಾರಿ ನಿಯಮ ಮುರಿದರೆ 500 ರೂಪಾಯಿ ಮತ್ತು ಎರಡನೇ ಬಾರಿಯೂ ಅದೇ ತಪ್ಪು ಮರುಕಳಿಸಿದರೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ. ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾರಿಯಾಗುತ್ತಿರುವ ಈ ಹೊಸ ಕ್ರಮವು ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಗುರಿ ಹೊಂದಿದೆ. ಈಗಾಗಲೇ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮತ್ತು ಹಾಹಾಕಾರದಿಂದ ಕಂಗೆಟ್ಟಿರುವ ಜನರಿಗೆ, ಈಗ ಕಸ ನಿರ್ವಹಣೆಯ ಈ ಹೊಸ ನಿಯಮಗಳು ಮತ್ತು ದಂಡದ ಭೀತಿಯು ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗರು ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ದಂಡದಿಂದ ಪಾರಾಗುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.




