ಶುದ್ಧ ಕುಡಿಯುವ ನೀರಿನ ಘಟಕವೇ ಬಂದ್..!

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಜನರಿಗೆ ಹನಿ ನೀರು ಸಿಗದೆ ಪರದಾಡುವಂತಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಪಟ್ಟಣದ ಕುರುಬರ ಗಲ್ಲಿಯ ವಾರ್ಡ್ ಸಂಖ್ಯೆ 12ರಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಈ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ನೀರು ಪೂರೈಕೆಗಾಗಿ ಪ್ರತ್ಯೇಕ ಕೊಳವೆಬಾವಿಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆದರೆ ದುರದೃಷ್ಟವಶಾತ್, ಈ ಘಟಕವು ಉದ್ಘಾಟನೆಯಾದಾಗಿನಿಂದಲೂ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಹನಿ ನೀರಿಗೂ ಜನರು ಹಾಹಾಕಾರ ಪಡುವಂತಾಗಿದೆ. ಹೆಸರಿಗಷ್ಟೇ ಶುದ್ಧ ಕುಡಿಯುವ ನೀರಿನ ಘಟಕ ಎಂಬಂತಾಗಿದ್ದು, ವರ್ಷಗಳೇ ಕಳೆದರೂ ಈ ಸಮಸ್ಯೆಗೆ ಮುಕ್ತಿ ಸಿಗದಿರುವುದು ಬನಹಟ್ಟಿ ಜನರನ್ನು ಕೆರಳಿಸಿದೆ.
ಬೇಸಿಗೆಯ ತಲೆಸುಡುವ ಬಿರುಬಿಸಿಲು ಈಗಾಗಲೇ ಪ್ರಾರಂಭವಾಗಿದ್ದು, ಕುಡಿಯುವ ನೀರಿಗಾಗಿ ವಾರ್ಡ್ ನಿವಾಸಿಗಳು ನಿತ್ಯ ಪರದಾಡುವಂತಾಗಿದೆ. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರದ ಸಾರ್ವಜನಿಕ ಹಣ ವ್ಯರ್ಥವಾಗುತ್ತಿರುವುದಲ್ಲದೆ, ಜನರಿಗೆ ಮೂಲಭೂತ ಸೌಕರ್ಯವೂ ಸಿಗುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಬಂದ್ ಆಗಿರುವ ಈ ಘಟಕವನ್ನು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರೆಯೇ ಎಂದು ಕಾದುನೋಡಬೇಕಿದೆ.




