ಕ್ರಿಕೆಟ್ರಾಜ್ಯಸುದ್ದಿ

ಐಪಿಎಲ್ ಟಿಕೆಟ್‌ ಆಸಕ್ತಿ ಇರೋರು “ಹಣ ಕೊಟ್ಟು ಖರೀದಿಸಲಿ”– ಡಿಕೆ ಸುರೇಶ್‌

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ (IPL 2026) ಪಂದ್ಯಗಳ ಟಿಕೆಟ್ ಹಂಚಿಕೆ ವಿಚಾರ ಈಗ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರತಿಯೊಬ್ಬ ಶಾಸಕರಿಗೆ 4 ಉಚಿತ ಟಿಕೆಟ್ ಬೇಕು ಎಂಬ ಬೇಡಿಕೆಯ ನಡುವೆ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರು “ಐಪಿಎಲ್ ಒಂದು ವಾಣಿಜ್ಯ ಆಟವೇ ಹೊರತು ರಾಷ್ಟ್ರೀಯ ಕ್ರೀಡೆಯಲ್ಲ, ಆಸಕ್ತಿ ಇರುವವರು ಹಣ ಕೊಟ್ಟು ಟಿಕೆಟ್ ಖರೀದಿಸಲಿ” ಎಂದು ನೀಡಿರುವ ಹೇಳಿಕೆ ಗಮನಾರ್ಹವಾಗಿದೆ. ಇದು ಜನಪ್ರತಿನಿಧಿಗಳಲ್ಲಿನ ‘ವಿಐಪಿ ಸಂಸ್ಕೃತಿ’ಗೆ ವಿರುದ್ಧವಾದ ನಿಲುವಾಗಿದ್ದು, ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ವಿವಾದದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಆರ್‌ಸಿಬಿ ಕೆಎಸ್‌ಸಿಎ (KSCA) ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳ ಜೊತೆ ನಡೆಸಲಿರುವ ಎರಡನೇ ಹಂತದ ಸಭೆಯು ಕುತೂಹಲ ಮೂಡಿಸಿದೆ. ಶಾಸಕರಿಗೆ ಕೇವಲ ಟಿಕೆಟ್ ನೀಡುವುದಷ್ಟೇ ಅಲ್ಲದೆ, ಅವರಿಗಾಗಿ ಪ್ರತ್ಯೇಕ ಸ್ಟ್ಯಾಂಡ್ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಈಗಾಗಲೇ ಕೆಲವು ಶಾಸಕರು ತಮಗೆ ಉಚಿತ ಟಿಕೆಟ್‌ಗಳು ಬೇಡ ಎಂದು ಹೇಳಿರುವುದು ಈ ಚರ್ಚೆಗೆ ಹೊಸ ಆಯಾಮ ನೀಡಿದೆ.

ಒಂದೆಡೆ ರಾಜ್ಯದಲ್ಲಿ ತೀವ್ರ ನೀರಿನ ಕೊರತೆ ಮತ್ತು ಬಿಎಂಟಿಸಿಯಂತಹ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ, ಜನಪ್ರತಿನಿಧಿಗಳು ಐಪಿಎಲ್ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

Comments (0)

Your email address will not be published. Required fields are marked *

Back to top button