
ಗದಗ:ಮಗಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದವರ ನಡುವೆ ಉಂಟಾದ ಸಣ್ಣ ಭಿನ್ನಾಭಿಪ್ರಾಯವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಮಗಳ ಮದುವೆಯನ್ನು ತನ್ನ ಇಚ್ಛೆಯಂತೆ ನೆರವೇರಿಸಿದ ಎಂಬ ಕಾರಣಕ್ಕೆ ಸಹೋದರರಿಂದಲೇ ಮಾರಣಾಂತಿಕ ಹಲ್ಲೆಗೊಳಗಾಗಿದ್ದ 47 ವರ್ಷದ ಗಿರೀಶಪ್ಪ ಆಲೂರು, ಚಿಕಿತ್ಸೆ ಫಲಿಸದೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಹಿನ್ನೆಲೆಯ ಪ್ರಕಾರ, ಗಿರೀಶಪ್ಪ ತನ್ನ ಮಗಳು ಪವಿತ್ರಾಳನ್ನು ಸಂಬಂಧಿಕರ ಹುಡುಗನಿಗೆ ನೀಡಿ ಮದುವೆ ಮಾಡಿದ್ದರು. ಆದರೆ ಈ ಮದುವೆಗೆ ಅವರ ಸಹೋದರರಾದ ಈರಣ್ಣ ಮತ್ತು ಶಿವಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳಿಗೆ ಸರ್ಕಾರಿ ಕೆಲಸವಿರುವ ಹುಡುಗನನ್ನೇ ನೋಡಬೇಕೆಂದು ಶಿವಕುಮಾರ್ ಒತ್ತಾಯಿಸಿದ್ದರು. ಆದರೆ, “ಸರ್ಕಾರಿ ಕೆಲಸದವನಾದರೆ ನಮ್ಮನ್ನು ನೋಡಿಕೊಳ್ಳುವುದಿಲ್ಲ” ಎಂಬ ಕಾರಣಕ್ಕೆ ಗಿರೀಶಪ್ಪ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಮದುವೆಯ ನಂತರ ಆಶೀರ್ವಾದ ಪಡೆಯಲು ಮಗಳನ್ನು ಸಹೋದರರ ಮನೆಗೆ ಕರೆದೊಯ್ದಾಗ ಹಳೇ ದ್ವೇಷದ ಕಿಚ್ಚು ಹೊತ್ತಿಕೊಂಡಿದೆ.
ಮದುವೆ ವಿಷಯದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಆಕ್ರೋಶದಿಂದ ಸಹೋದರರಾದ ಈರಣ್ಣ, ಶಿವಕುಮಾರ್ ಹಾಗೂ ಕುಟುಂಬದ ಸದಸ್ಯರಾದ ರತ್ನವ್ವ ಮತ್ತು ಗೀತಾ ಸೇರಿ ಗಿರೀಶಪ್ಪ ಮತ್ತು ಅವರ ಪತ್ನಿ ಲಕ್ಷ್ಮೀ ಅವರ ಮೇಲೆ ಬಾರುಕೋಲು ಹಾಗೂ ದೊಣ್ಣೆಗಳಿಂದ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ತಲೆ, ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಗಿರೀಶಪ್ಪ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅಂತಿಮವಾಗಿ ಸಹೋದರರ ಸಿಟ್ಟಿಗೆ ಬಡಪಾಯಿ ತಂದೆಯ ಪ್ರಾಣವೇ ಬಲಿಯಾಗಿದ್ದು, ಮದುವೆಯ ಸಂಭ್ರಮವಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.




