KOPPALAಜಿಲ್ಲೆ

ಗಂಗಾವತಿಯಲ್ಲಿ ನಶೆ ಮಾತ್ರೆ ದಂಧೆ ಬಯಲು; ಫ್ಯಾನ್ಸಿ ಸ್ಟೋರ್ ಮಾಲೀಕ ಪೊಲೀಸ್ ವಶಕ್ಕೆ!

ಕೊಪ್ಪಳ: ಗಂಗಾವತಿ ನಗರದಲ್ಲಿ ಫ್ಯಾನ್ಸಿ ಸ್ಟೋರ್ ಹೆಸರಿನಲ್ಲಿ ನಡೆಯುತ್ತಿದ್ದ ಭೀಕರ ನಶೆ ಮಾತ್ರೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ನಗರದ ದುರ್ಗಾದೇವಿ ಗುಡಿ ಸಮೀಪವಿರುವ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ ಮೇಲೆ ದಾಳಿ ನಡೆಸಿರುವ ಪೊಲೀಸರು, ಯುವಕರಿಗೆ ಅಕ್ರಮವಾಗಿ ಮಾತ್ರೆ ಪೂರೈಸುತ್ತಿದ್ದ ಮಾಲೀಕ ಕಿಶನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಕೇವಲ ಎರಡು ಮಾತ್ರೆಗಳಿಗೆ 300 ರೂಪಾಯಿ ವಸೂಲಿ ಮಾಡುತ್ತಿದ್ದ ಈತ, ನೋವು ನಿವಾರಕ ಮಾತ್ರೆಗಳ ಹೆಸರಿನಲ್ಲಿ ಯುವಕರ ಬದುಕಿನ ಜೊತೆ ಆಟವಾಡುತ್ತಿದ್ದ ಎಂಬ ಆಘಾತಕಾರಿ ಸತ್ಯ ಹೊರಬಂದಿದೆ.

ನಶೆಗಾಗಿ ಈ ಮಾತ್ರೆಗಳನ್ನು ಖರೀದಿಸುತ್ತಿದ್ದ ಯುವಕರು, ಕೇವಲ ಸೇವನೆಗೆ ಸೀಮಿತವಾಗದೆ ಅಪಾಯಕಾರಿ ಹಾದಿ ತುಳಿದಿದ್ದರು. ಹೆಚ್ಚು ‘ಕಿಕ್’ ಪಡೆಯುವ ಹಪಾಹಪಿಗೆ ಬಿದ್ದ ಯುವಕರು, ಮಾತ್ರೆಗಳನ್ನು ಪುಡಿ ಮಾಡಿ ಇಂಜೆಕ್ಷನ್ ಮೂಲಕ ನೇರವಾಗಿ ನರಗಳಿಗೆ ಚುಚ್ಚಿಸಿಕೊಳ್ಳುತ್ತಿದ್ದರು. ಈ ರೀತಿ ಇಂಜೆಕ್ಷನ್ ಪಡೆದಿದ್ದ ಲಕ್ಷ್ಮಿ ಕ್ಯಾಂಪ್ ನಿವಾಸಿ ಸಂಗನಗೌಡ ಎಂಬ ಯುವಕ ತೀವ್ರವಾಗಿ ಅಸ್ವಸ್ಥಗೊಂಡಿದ್ದರಿಂದ ಈ ಇಡೀ ಜಾಲದ ಕರಾಳ ಮುಖ ಬಯಲಾಗಿದೆ. ಅಸ್ವಸ್ಥ ಯುವಕನೇ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಈ ಅಕ್ರಮ ದಂಧೆಯ ಹಿಂದೆ ಸ್ಥಳೀಯ ಕೆಲವು ಮೆಡಿಕಲ್ ಸ್ಟೋರ್‌ಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಯುವ ಸಮೂಹವನ್ನು ಬಲಿಪಡೆಯುತ್ತಿರುವ ಈ ನಶೆ ಮಾಫಿಯಾದ ಅಸಲಿ ಕಿಂಗ್‌ಪಿನ್‌ಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗಂಗಾವತಿ ನಗರದ ಅನೇಕ ಯುವಕರು ಈ ಜಾಲಕ್ಕೆ ಸಿಲುಕಿ ಆರೋಗ್ಯ ಹಾಳುಮಾಡಿಕೊಂಡಿರುವ ಆತಂಕ ಎದುರಾಗಿದ್ದು, ಪೋಷಕರಲ್ಲಿ ಭೀತಿ ಮೂಡಿಸಿದೆ.

Comments (0)

Your email address will not be published. Required fields are marked *

Back to top button