ಪ್ರಿಯಕರನ ಜೊತೆಗೂಡಿ ಸ್ಕೆಚ್ ಹಾಕಿದ್ದ ‘ನವರಂಗಿ’ ಆಂಟಿ ಅರೆಸ್ಟ್!

ತುಮಕೂರು: ತಿಪಟೂರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿಸಿದ ಆರೋಪದ ಮೇಲೆ ಪತ್ನಿ ಫರ್ಜಾನಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಪತಿ ಮೃತಪಟ್ಟ ನಂತರ ಒಂಟಿಯಾಗಿದ್ದ ಫರ್ಜಾನಾಳಿಗೆ ಅಡುಗೆ ಭಟ್ಟ ಧನರಾಜ್ ಎಂಬಾತನ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಇವರ ಸಂಬಂಧದ ಬಗ್ಗೆ ತಿಳಿದ ಕುಟುಂಬಸ್ಥರು, ಕಳೆದ ಜನವರಿಯಲ್ಲಿ ಆಕೆಗೆ ಮನ್ಸೂರ್ ಪಾಷಾ ಎಂಬುವವರ ಜೊತೆ ಎರಡನೇ ಮದುವೆ ಮಾಡಿಸಿದ್ದರು. ಆದರೆ, ಮದುವೆಯ ನಂತರವೂ ಫರ್ಜಾನಾ ತನ್ನ ಪ್ರಿಯಕರನೊಂದಿಗೆ ಸಂಪರ್ಕದಲ್ಲಿದ್ದು, ಆತನೊಂದಿಗೆ ಹೊಸ ಜೀವನ ಆರಂಭಿಸಲು ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು.
ಮಾರ್ಚ್ 4ರಂದು ಧನರಾಜ್‌ನ ಸ್ನೇಹಿತ ದರ್ಶನ್ ಎಂಬಾತ, ಮನ್ಸೂರ್ ಪಾಷಾಗೆ ಫೋನ್ ಮಾಡಿ ‘ಗುಜರಿ ಸಾಮಾನಿದೆ ಬನ್ನಿ’ ಎಂದು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾನೆ. ಗುಜರಿ ವ್ಯಾಪಾರಿಯಾಗಿದ್ದ ಮನ್ಸೂರ್ ಸ್ಥಳಕ್ಕೆ ತಲುಪುತ್ತಿದ್ದಂತೆ, ಧನರಾಜ್ ಮತ್ತು ಆತನ ಗೆಳೆಯರು ಬೈಕ್‌ನ ಶಾಕ್ ಅಬ್ಸರ್ವರ್ ರಾಡ್‌ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೇವಲ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮನ್ಸೂರ್, ಹೆಂಡತಿಯ ಕ್ರೂರ ಸಂಚಿಗೆ ಬಲಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ತಿಪಟೂರು ಗ್ರಾಮಾಂತರ ಪೊಲೀಸರು ಮನ್ಸೂರ್ ಅವರ ಕಾಲ್ ಹಿಸ್ಟರಿ ಪರಿಶೀಲಿಸಿದಾಗ ಸತ್ಯ ಹೊರಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಫರ್ಜಾನಾ, ಪ್ರಿಯಕರ ಧನರಾಜ್ ಮತ್ತು ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.




