ಜಿಲ್ಲೆಸುದ್ದಿ

ಬೆಂಗಳೂರು ಕಂದಾಯ ಇಲಾಖೆಯಲ್ಲಿ ಬಿರುಗಾಳಿ; ಎ.ಸಿ. ಡಾ. ಕಿರಣ್‌ಗೂ ತಲೆದಂಡದ ಭೀತಿ!

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ವಿರುದ್ಧ ಸರ್ಕಾರದ ಚಾಟಿ ಬೀಸುವ ಪ್ರಕ್ರಿಯೆ ಮುಂದುವರೆದಿದ್ದು, ಈಗ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಡಾ. ಕಿರಣ್ ಮೇಲೆ ಅಮಾನತ್ತಿನ ತೂಗುಗತ್ತಿ ನೇತಾಡುತ್ತಿದೆ. ಬೆಂಗಳೂರು ದಕ್ಷಿಣದ ಗ್ರೇಡ್-1 ತಹಶೀಲ್ದಾರ್ ಅಶ್ವಿನಿ ಜಿ. ಮತ್ತು ವಿಶೇಷ ತಹಶೀಲ್ದಾರ್ ವರ್ಷಾ ವಡೆಯರ್ ಅವರ ಅಮಾನತು ಆದೇಶ ಹೊರಬಿದ್ದ ಬೆನ್ನಲ್ಲೇ, ಕಂದಾಯ ಅಧಿಕಾರಿಗಳಲ್ಲಿ ಭಾರಿ ನಡುಕ ಹುಟ್ಟಿಸಿದೆ.

ಡಾ. ಕಿರಣ್ ವಿರುದ್ಧ ಕೇಳಿಬಂದಿರುವ ಪ್ರಮುಖ ಆರೋಪವೆಂದರೆ ಕಂದಾಯ ಇಲಾಖೆಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರುವುದು. ಅನೇಕ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಸರಿಯಾಗಿ ಹಾಜರಾಗದ ಮತ್ತು ದಾಖಲೆಗಳನ್ನು ಸಲ್ಲಿಸದ ಕಾರಣ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಸ್ವತಃ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ಕಿರಣ್ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಈ ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ.

ಕೋರ್ಟ್ ಕಲಾಪಗಳಲ್ಲಿನ ಸತತ ವಿಫಲತೆ ಮತ್ತು ಕರ್ತವ್ಯದ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ, ಡಾ. ಕಿರಣ್ ರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಅಡ್ವೊಕೇಟ್ ಜನರಲ್ ಅವರು ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದ್ದಾರೆ. ಹೈಕೋರ್ಟ್‌ನಿಂದ ಪದೇ ಪದೇ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು ಸರ್ಕಾರದ ಘನತೆಗೆ ಧಕ್ಕೆ ತರುತ್ತಿದೆ ಎಂಬುದು ಈ ಪತ್ರದ ಸಾರಾಂಶವಾಗಿದೆ. ಬೆಂಗಳೂರು ದಕ್ಷಿಣದ ಇಬ್ಬರು ತಹಶೀಲ್ದಾರರ ಅಮಾನತು ಈಗಾಗಲೇ ಕಂದಾಯ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಈಗ ಉತ್ತರ ಉಪವಿಭಾಗಾಧಿಕಾರಿಯ ಸರದಿ ಬಂದಿರುವುದು ಅಧಿಕಾರಿ ವರ್ಗದಲ್ಲಿ ಆತಂಕ ಮೂಡಿಸಿದೆ.

ಕಂದಾಯ ಸಚಿವರು ಈ ಹಿಂದೆಯೇ ಎಚ್ಚರಿಸಿದಂತೆ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವ ಮತ್ತು ರೈತರಿಗೆ ತೊಂದರೆ ಕೊಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯುವ ಸಾಧ್ಯತೆ ಇದೆ. ಡಾ. ಕಿರಣ್ ಅವರ ಅಮಾನತು ಆದೇಶ ಯಾವುದೇ ಕ್ಷಣದಲ್ಲಿ ಹೊರಬೀಳುವ ನಿರೀಕ್ಷೆಯಿದ್ದು, ಇದು ಇಲಾಖೆಯ ಒಳಗಿನ ದೊಡ್ಡ ಮಟ್ಟದ ಶಿಸ್ತುಕ್ರಮದ ಭಾಗವೆಂದು ಪರಿಗಣಿಸಲಾಗಿದೆ.

Comments (0)

Your email address will not be published. Required fields are marked *

Back to top button