ಜಿಲ್ಲೆಸುದ್ದಿ

ಆಟೋ ಚಾಲಕರ ಆಕ್ರೋಶ; ಯುದ್ಧದ ಹೊಡೆತಕ್ಕೆ ಗ್ಯಾಸ್ ಖಾಲಿ ಖಾಲಿ!

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ಅಡುಗೆ ಅನಿಲ ಮಾತ್ರವಲ್ಲದೆ, ಆಟೋ ಎಲ್‌ಪಿಜಿಗೂ ಭಾರಿ ಅಭಾವ ಸೃಷ್ಟಿಯಾಗಿದೆ. ನಗರದ ಎಪಿಎಂಸಿ ಬಳಿ ಇರುವ ಗ್ಯಾಸ್ ಬಂಕ್‌ಗಳಿಗೆ ಆಟೋ ಚಾಲಕರು ಮುಗಿಬೀಳುತ್ತಿದ್ದು, ಗಂಟೆಗಟ್ಟಲೆ ಕಾಯುತ್ತಿದ್ದರೂ ಗ್ಯಾಸ್ ಸಿಗದೆ ಹೈರಾಣಾಗಿದ್ದಾರೆ. “ಯುದ್ಧ ಎಲ್ಲೋ ನಡೆಯುತ್ತಿದೆ, ಆದರೆ ಅದರ ಹೊಡೆತ ನಮಗೆ ಬೀಳುತ್ತಿದೆ” ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಈಗ ಇಂಧನವೂ ಸಿಗದಿರುವುದು ಬಡ ಆಟೋ ಚಾಲಕರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಂಕ್‌ಗಳ ಮುಂದೆ ಅನಿಲಕ್ಕಾಗಿ ಕಾದು ಕುಳಿತಿರುವ ಚಾಲಕರು ದಶಕಗಳಿಂದ ಇದೇ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದು, ಈಗ ದಿನದ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಅತ್ತ ಬಂಕ್ ಸಿಬ್ಬಂದಿ ಕೂಡ ಅಸಹಾಯಕರಾಗಿದ್ದು, ಕಂಪನಿಗಳಿಂದ ಸ್ಟಾಕ್ ಬರುತ್ತಿಲ್ಲ ಎಂದು ಕೈಚೆಲ್ಲಿದ್ದಾರೆ. “ನಾವು ಬೇಡಿಕೆ ಇಟ್ಟಿದ್ದರೂ ವಿತರಣೆ ಆಗುತ್ತಿಲ್ಲ, ಇಂದು ಅಥವಾ ನಾಳೆ ಬಂಕ್ ಖಾಲಿಯಾಗುವ ಸಾಧ್ಯತೆಯಿದೆ. ಸ್ಟಾಕ್ ಬರುವವರೆಗೆ ಬಂಕ್ ಬಂದ್ ಮಾಡುವುದು ಅನಿವಾರ್ಯ” ಎಂದು ಸಿಬ್ಬಂದಿ ಹೇಳುತ್ತಿರುವುದು ಆಟೋ ಚಾಲಕರಲ್ಲಿ ಆತಂಕ ಹೆಚ್ಚಿಸಿದೆ.

ಹೋಟೆಲ್ ಉದ್ಯಮದ ಬೆನ್ನಲ್ಲೇ ಈಗ ಸಾರಿಗೆ ವಲಯವೂ ಗ್ಯಾಸ್ ಅಭಾವಕ್ಕೆ ಸಿಲುಕಿರುವುದು ಜನಸಾಮಾನ್ಯರ ಓಡಾಟಕ್ಕೂ ತೊಂದರೆ ಉಂಟುಮಾಡುತ್ತಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ, ಸಾವಿರಾರು ಆಟೋ ಚಾಲಕರ ಕುಟುಂಬಗಳು ಬೀದಿಗೆ ಬೀಳುವ ಭೀತಿ ಎದುರಾಗಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಗದ್ದಲ ನಡೆಯುತ್ತಿದ್ದರೂ, ಗ್ರೌಂಡ್ ರಿಯಾಲಿಟಿಯಲ್ಲಿ ಮಾತ್ರ ಪರಿಸ್ಥಿತಿ ತೀರಾ ಹದಗೆಟ್ಟಿದೆ.

Comments (0)

Your email address will not be published. Required fields are marked *

Back to top button