ಕ್ರೈಂ ಸ್ಟೋರಿಜಿಲ್ಲೆಶಿಕ್ಷಣಸುದ್ದಿ

ಕಾಲೇಜು ಆಡಳಿತ ಮಂಡಳಿಯ ವರ್ತನೆಯಿಂದ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ

ಬಳ್ಳಾರಿ: ಕಾಲೇಜು ಆಡಳಿತ ಮಂಡಳಿಯು ಪೋಷಕರನ್ನು ಕರೆಸಿ ಅವಮಾನಿಸಿದ ಹಿನ್ನೆಲೆಯಲ್ಲಿ ಮನನೊಂದು ಡಿಪ್ಲೋಮಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಗುಗ್ಗರಹಟ್ಟಿ ನಿವಾಸಿ, ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಅರವಿಂದ್ ಎಂದು ಗುರುತಿಸಲಾಗಿದೆ. ಈ ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಕಳೆದ ಮಂಗಳವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಸಣ್ಣ ಮಟ್ಟದ ಜಗಳ ನಡೆದಿತ್ತು ಎನ್ನಲಾಗಿದೆ. ಈ ಸಂಬಂಧ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ವಿಭಾಗದ ಮುಖ್ಯಸ್ಥರು (HOD) ಅರವಿಂದ್ ಪೋಷಕರನ್ನು ಕಾಲೇಜಿಗೆ ಕರೆಸಿದ್ದರು. “ಇಂತಹ ಗಲಾಟೆ ಮಾಡುವ ಹುಡುಗರನ್ನು ನಾವು ಕಾಲೇಜಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ, ಇದು ಕೊನೆಯ ಎಚ್ಚರಿಕೆ” ಎಂದು ಪೋಷಕರಿಗೆ ಕಠಿಣ ಮಾತುಗಳಿಂದ ಎಚ್ಚರಿಸಿದ್ದರು ಎನ್ನಲಾಗಿದೆ.

ಅರವಿಂದ್ ಸೋದರ ಗಣೇಶ್ ಅವರ ಹೇಳಿಕೆಯ ಪ್ರಕಾರ, “ಅಡ್ಮಿಷನ್ ರದ್ದು ಮಾಡುವುದಾಗಿ ಬೆದರಿಸಿದಾಗ ಅರವಿಂದ್ ತಾಯಿ ಪ್ರಿನ್ಸಿಪಾಲ್ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದರು. ಆದರೆ ಪ್ರಿನ್ಸಿಪಾಲ್ ಕನಿಷ್ಠ ಮಾನವೀಯತೆ ತೋರದೆ ಪೋಷಕರನ್ನು ಅವಮಾನಿಸಿದ್ದರು.” ಈ ಘಟನೆಯಿಂದ ತೀವ್ರವಾಗಿ ನೊಂದ ಅರವಿಂದ್, ಅದೇ ದಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅರವಿಂದ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಹಪಾಠಿಗಳು ಮತ್ತು ನೂರಾರು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಜಮಾಯಿಸಿದರು. ಆರಂಭದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ವಿದ್ಯಾರ್ಥಿಗಳು, ನಂತರ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ತೀವ್ರಗೊಳಿಸಿದರು. ಈ ವೇಳೆ ಕಾಲೇಜಿನ ಟೇಬಲ್, ಗ್ಲಾಸ್ ಹಾಗೂ ಕಿಟಕಿಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಅರವಿಂದ್ ಸಾವಿಗೆ ಕಾರಣರಾದ ಪ್ರಿನ್ಸಿಪಾಲ್ ಮತ್ತು HOD ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.ಕಾಲೇಜು ಆಡಳಿತ ಮಂಡಳಿಯು ಸ್ಥಳಕ್ಕೆ ಆಗಮಿಸಿ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರುವ ಇಂತಹ ಕ್ರಮಗಳನ್ನು ನಿಲ್ಲಿಸಬೇಕು. ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button