ಜಿಲ್ಲೆವೈರಲ್ ನ್ಯೂಸ್ಸುದ್ದಿ

ತ್ರೀ ಸ್ಟಾರ್ ಹೋಟೆಲ್‌ನಲ್ಲೂ ಈಗ ಸೌದೆ ಒಲೆ; ಸಿಲಿಂಡರ್ ಇಲ್ಲದೆ ನಲುಗಿದ ಸಿಲಿಕಾನ್ ಸಿಟಿ

ಬೆಂಗಳೂರು: ಹೋಟೆಲ್ ಉದ್ಯಮಕ್ಕೆ ಈಗ ಎಲ್‌ಪಿಜಿ ಸಿಲಿಂಡರ್ ಕೊರತೆಯ ಬಿಸಿ ತಟ್ಟಿದ್ದು, ಇಡೀ ಉದ್ಯಮವೇ ಸಂಕಷ್ಟಕ್ಕೆ ಸಿಲುಕಿದೆ. ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಆಕಾಶಕ್ಕೆ ಏರಿರುವುದರ ಜೊತೆಗೆ ಅವುಗಳ ಲಭ್ಯತೆಯೂ ಸಂಪೂರ್ಣವಾಗಿ ಕುಸಿದಿದೆ. ಇದರಿಂದಾಗಿ ನಗರದ ಪ್ರತಿಷ್ಠಿತ ಹೋಟೆಲ್‌ಗಳು ಕೂಡ ತಮ್ಮ ಅಡುಗೆ ಮನೆಯನ್ನು ಮುನ್ನೆಡೆಸಲು ಹರಸಾಹಸ ಪಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಗ್ಯಾಸ್ ಪೂರೈಕೆಯಾಗದ ಕಾರಣ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಸಂಪ್ರದಾಯಿಕ ಅಡುಗೆ ಪದ್ಧತಿಗೆ ಮೊರೆಹೋಗುತ್ತಿದ್ದಾರೆ.

ನಗರದ ದೊಡ್ಡ ದೊಡ್ಡ ತ್ರೀ ಸ್ಟಾರ್ ಹೋಟೆಲ್‌ಗಳಲ್ಲಿ ಈಗ ಗ್ಯಾಸ್ ಒಲೆಗಳ ಬದಲು ಸೌದೆ ಒಲೆಗಳು ಉರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸಿಲಿಂಡರ್ ಇಲ್ಲದೆ ಅತಿಥಿಗಳಿಗೆ ಆಹಾರ ಸಿದ್ಧಪಡಿಸಲು ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ಸೌದೆಯನ್ನು ಆಶ್ರಯಿಸಲಾಗುತ್ತಿದೆ. ಸಾವಿರಾರು ಹೋಟೆಲ್‌ಗಳಿಗೆ ದಿನನಿತ್ಯ ಐದರಿಂದ ಹತ್ತು ವಾಣಿಜ್ಯ ಸಿಲಿಂಡರ್‌ಗಳ ಅವಶ್ಯಕತೆಯಿದೆ. ಆದರೆ ಕಳೆದ ಕೆಲವು ದಿನಗಳಿಂದ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಸ್ಟಾಕ್ ಇಟ್ಟಿದ್ದ ಸಿಲಿಂಡರ್‌ಗಳೂ ಈಗ ಖಾಲಿಯಾಗುತ್ತಿವೆ.

ಇದೇ ಪರಿಸ್ಥಿತಿ ಮುಂದುವರೆದರೆ ಬೆಂಗಳೂರಿನ ಹೋಟೆಲ್‌ಗಳು ಬಾಗಿಲು ಹಾಕುವ ಪರಿಸ್ಥಿತಿ ಎದುರಾಗಲಿದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಗಗನಕ್ಕೇರಿರುವ ಬೆಲೆ, ಇನ್ನೊಂದು ಕಡೆ ಸಿಲಿಂಡರ್‌ಗಳ ಕೊರತೆ ಹೋಟೆಲ್ ಮಾಲೀಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಡುಗೆ ಮನೆಯಲ್ಲಿ ಆಧುನಿಕ ಉಪಕರಣಗಳಿದ್ದರೂ ಇಂಧನವಿಲ್ಲದೆ ಅವು ಮೂಲೆ ಸೇರುತ್ತಿವೆ. ಅನಿವಾರ್ಯವಾಗಿ ಸೌದೆ ಒಲೆಗಳನ್ನು ಬಳಸುತ್ತಿರುವುದರಿಂದ ಅಡುಗೆ ಮಾಡುವುದು ತಡವಾಗುತ್ತಿದೆ ಮತ್ತು ಇದು ಹೊಗೆಯ ಸಮಸ್ಯೆಯನ್ನು ಕೂಡ ತಂದೊಡ್ಡುತ್ತಿದೆ.

ಸರ್ಕಾರ ತಕ್ಷಣ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಸುಗಮಗೊಳಿಸಬೇಕು ಎಂಬುದು ಹೋಟೆಲ್ ಮಾಲೀಕರ ಸಂಘದ ಒತ್ತಾಯವಾಗಿದೆ. ಲಭ್ಯತೆ ಇಲ್ಲದಿರುವುದು ಕೃತಕ ಅಭಾವವೇ ಅಥವಾ ಪೂರೈಕೆಯಲ್ಲಿ ತಾಂತ್ರಿಕ ದೋಷವಿದೆಯೇ ಎಂಬ ಗೊಂದಲವೂ ಮೂಡಿದೆ. ಬಡವರ ಹಸಿವು ನೀಗಿಸುವ ಹೋಟೆಲ್‌ಗಳು ಮತ್ತು ಕೆಫೆಗಳು ಈ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಸೇವೆ ನೀಡಲು ಪರದಾಡುತ್ತಿವೆ.

Comments (0)

Your email address will not be published. Required fields are marked *

Back to top button