
ಕರ್ನಾಟಕ ರಾಜಕಾರಣದ “ಕುರ್ಚಿ ಕದನ” ದೆಹಲಿ ಅಂಗಳ ತಲುಪಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿಯೂ ಮಹತ್ವದ ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತಿವೆ. ಎಸ್ಸಿ ಒಳಮೀಸಲಾತಿ ಚರ್ಚೆಯ ನೆಪದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಸಂಜಯ್ ನಗರದ ನಿವಾಸಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಉಪಾಹಾರದ ನೆಪದಲ್ಲಿ ನಡೆದ ಈ ಹಿರಿಯ ದಲಿತ ನಾಯಕರ ಭೇಟಿಯಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದು, ರಾಜ್ಯ ರಾಜಕಾರಣದ ಮುಂದಿನ ದಿಕ್ಕಿನ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಭೇಟಿಯು ಕೇವಲ ಮೀಸಲಾತಿ ವಿಚಾರಕ್ಕೆ ಸೀಮಿತವಾಗಿರದೆ, ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟ್ ಬೀಸುವ ತಂತ್ರಗಾರಿಕೆಯ ಭಾಗವಾಗಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಒಂದು ಕಡೆ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಅಧಿಕಾರ ಹಂಚಿಕೆಗಾಗಿ ಪಟ್ಟು ಹಿಡಿದಿದ್ದರೆ, ಇತ್ತ ರಾಜ್ಯದ ಹಿರಿಯ ಸಚಿವರು ಒಗ್ಗೂಡಿ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ. ಈ ಬೆಳವಣಿಗೆಯು ಸಿಎಂ ಮತ್ತು ಡಿಸಿಎಂ ನಡುವಿನ ಪವರ್ ಶೇರಿಂಗ್ ಸಂಘರ್ಷವನ್ನು ಮತ್ತಷ್ಟು ಸಂಕೀರ್ಣಗೊಳಿಸಿದ್ದು, ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನದಂತೆ ಭಾಸವಾಗುತ್ತಿದೆ.
ಪ್ರಸ್ತುತ ಕರ್ನಾಟಕ ಕಾಂಗ್ರೆಸ್ನ ಭವಿಷ್ಯದ ಚೆಂಡು ಪೂರ್ಣವಾಗಿ ಹೈಕಮಾಂಡ್ ಅಂಗಳದಲ್ಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಈ ಅಧಿಕಾರದ ಜಟಾಪಾಟಿಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಈಗಿನ ದೊಡ್ಡ ಪ್ರಶ್ನೆ. ಹಿರಿಯ ಸಚಿವರ ಈ ಗುಪ್ತ ಸಭೆಗಳು ಹೈಕಮಾಂಡ್ ತೆಗೆದುಕೊಳ್ಳಲಿರುವ ನಿರ್ಧಾರದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿವೆ ಎಂಬುದನ್ನು ಕಾದು ನೋಡಬೇಕಿದೆ. ಇಡೀ ರಾಜ್ಯದ ಕೈ ನಾಯಕರ ಚಿತ್ತ ಈಗ ದೆಹಲಿಯತ್ತ ನೆಟ್ಟಿದ್ದು, ಶೀಘ್ರದಲ್ಲೇ ಒಂದು ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.




