
ಹಾಸನ: ನಗರಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತ್ಯನಾರಾಯಣ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸುವ ಮೂಲಕ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ಕುಮಾರ್ ನೇತೃತ್ವದ ತಂಡವು ಮುಂಜಾನೆ 5:15ಕ್ಕೇ ಸತ್ಯನಾರಾಯಣ ಅವರ ಮನೆ ಬಾಗಿಲಿಗೆ ಬಂದು ನಿಂತಿದ್ದರು. ಆದರೆ ಅಧಿಕಾರಿಗಳು ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಎಇಇ ಸತ್ಯನಾರಾಯಣ, ತಕ್ಷಣವೇ ಮನೆಯ ದೀಪಗಳನ್ನು ಆರಿಸಿ ಬಾಗಿಲು ಹಾಕಿಕೊಂಡಿದ್ದಾರೆ. ಅಧಿಕಾರಿಗಳು ಎಷ್ಟೇ ಕರೆದರೂ ಬಾಗಿಲು ತೆರೆಯದೆ ಸತಾಯಿಸುವ ಮೂಲಕ ತನಿಖೆಗೆ ಅಸಹಕಾರ ತೋರುವ ವಿಫಲ ಪ್ರಯತ್ನ ನಡೆಸಿದ್ದಾರೆ.
ಬಾಗಿಲು ತೆರೆಯದ ಸತ್ಯನಾರಾಯಣ ಗಂಟೆಗಟ್ಟಲೆ ಲೋಕಾಯುಕ್ತ ತಂಡವನ್ನು ಬೀದಿಯಲ್ಲೇ ಕಾಯುವಂತೆ ಮಾಡಿದರು. ಅಷ್ಟೇ ಅಲ್ಲದೆ, ತಮ್ಮ ಮೊಬೈಲ್ ಫೋನ್ ಅನ್ನು ಕೂಡ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದಂತೆ ಕಳ್ಳಾಟವಾಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ತೀವ್ರ ಪ್ರಯತ್ನ ಮತ್ತು ಹರಸಾಹಸದ ನಂತರ, ಸುಮಾರು ಮೂರು ಗಂಟೆಗಳ ಕಾಲ ಸತಾಯಿಸಿದ ಸತ್ಯನಾರಾಯಣ ಕೊನೆಗೂ ಬಾಗಿಲು ತೆರೆದಿದ್ದಾರೆ.
ಸದ್ಯ ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ. ಸತ್ಯನಾರಾಯಣ ಅವರ ಅಕ್ರಮ ಆಸ್ತಿಪಾಸ್ತಿ ಮತ್ತು ಭ್ರಷ್ಟಾಚಾರದ ಆಳ-ಅಗಲವನ್ನು ಪತ್ತೆಹಚ್ಚಲು ಲೋಕಾಯುಕ್ತ ತಂಡ ಜಾಲ ಬೀಸಿದೆ. ಈ ಕಾರ್ಯಾಚರಣೆಯು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳ ಮುಂದಿನ ನಡೆ ಕುತೂಹಲ ಮೂಡಿಸಿದೆ.




