ದಾವಣಗೆರೆ: ಪ್ರಸಿದ್ಧ ದುಗ್ಗಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್ ಮೂಲದ ಪೈಲ್ವಾನ್ ಮಿರ್ಜಾ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ. ಇರಾನ್ ದೇಶದಲ್ಲಿ ಯುದ್ಧದ ಕಾರ್ಮೋಡ ಕವಿದು ಆತಂಕದ ವಾತಾವರಣವಿದ್ದರೂ, ಕ್ರೀಡಾ ಸ್ಫೂರ್ತಿಯನ್ನು ಮೆರೆದ ಮಿರ್ಜಾ ಅವರು ಬೆಣ್ಣೆ ನಗರಿಯ ಮಣ್ಣಿನ ಅಖಾಡದಲ್ಲಿ ಅಪ್ರತಿಮ ಹೋರಾಟ ನೀಡಿದ್ದಾರೆ. ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯು ದೇಶ-ವಿದೇಶಿ ಪೈಲ್ವಾನರ ರೋಚಕ ಸೆಣಸಾಟಕ್ಕೆ ಸಾಕ್ಷಿಯಾಯಿತು.
ಅಖಾಡದಲ್ಲಿ ಇರಾನ್‌ನ ಮಿರ್ಜಾ ಮತ್ತು ಪುಣೆಯ ರವಿರಾಜ್ ನಡುವೆ ನಡೆದ ಹಣಾಹಣಿ ಅತ್ಯಂತ ಕುತೂಹಲಕಾರಿಯಾಗಿತ್ತು. ಸಾವಿರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಮೈನವಿರೇಳಿಸುವ ದಾಳಿ-ಪ್ರತಿದಾಳಿಗಳಿಂದ ಕೂಡಿದ್ದ ಪಂದ್ಯವು ಅಂತಿಮವಾಗಿ ಸಮಬಲದೊಂದಿಗೆ ಡ್ರಾನಲ್ಲಿ ಅಂತ್ಯಗೊಂಡಿತು. ಉಭಯ ಪಟುಗಳ ದೈಹಿಕ ಬಲ ಹಾಗೂ ತಾಂತ್ರಿಕ ಪ್ರದರ್ಶನವನ್ನು ಕಂಡ ದಾವಣಗೆರೆಯ ಜನತೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ತಾಯ್ನಾಡಿನಲ್ಲಿ ಯುದ್ಧದ ಭೀತಿ ಎದುರಿಸುತ್ತಿರುವ ಮಿರ್ಜಾ ಅವರಿಗೆ ಭಾರತೀಯರ ಪ್ರೀತಿ ಮತ್ತು ಕ್ರೀಡಾಭಿಮಾನವು ಹೊಸ ಧೈರ್ಯವನ್ನು ನೀಡಿದೆ. ಭಾರತದ ಮಣ್ಣಿನ ಸಂಸ್ಕೃತಿ ಹಾಗೂ ಕನ್ನಡಿಗರ ಹೃದಯವಂತಿಕೆಗೆ ಮಾರುಹೋದ ಇರಾನ್ ಪಟು, ಜಯ-ಅಪಜಯಗಳ ಆಚೆಗೂ ಪ್ರತಿಯೊಬ್ಬ ಕ್ರೀಡಾಪ್ರೇಮಿಯ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಈ ಕುಸ್ತಿ ಪಂದ್ಯಾವಳಿಯು ಯುದ್ಧದ ಆತಂಕದ ಮಧ್ಯೆಯೂ ಕ್ರೀಡೆ ಹೇಗೆ ಮಾನವೀಯತೆಯನ್ನು ಬೆಸೆಯುತ್ತದೆ ಎಂಬುದಕ್ಕೆ ಮಾದರಿಯಾಯಿತು.


