ಕೊಡಗು: ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಹಿಂದೂ ಸಂಗಮ’ ಕಾರ್ಯಕ್ರಮದ ಪ್ರಚಾರದ ವೇಳೆ ಅಹಿತಕರ ಘಟನೆಯೊಂದು ಸಂಭವಿಸಿದೆ. ಬಲ್ಲಮಾವಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಈ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಗೌತಮ್ ಎಂಬ ಯುವಕ ಮತ್ತು ಇತರರು ಪಿಕಪ್ ವಾಹನದಲ್ಲಿ ಸೌಂಡ್ ಬಾಕ್ಸ್ ಅಳವಡಿಸಿ ನಾಪೋಕ್ಲು ಪಟ್ಟಣದಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಒಂದು ಗುಂಪು, ಈ ಪ್ರದೇಶದಲ್ಲಿ ಯಾಕೆ ಪ್ರಚಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ಜಗಳ ತೆಗೆದಿದೆ. ಆರಂಭದಲ್ಲಿ ಮಾತಿನ ಚಕಮಕಿಯಾಗಿದ್ದ ಈ ಘಟನೆಯು ನಂತರ ವಿಕೋಪಕ್ಕೆ ತಿರುಗಿ, ಕಿಡಿಗೇಡಿಗಳು ಗೌತಮ್ ಎಂಬ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಗೌತಮ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಲ್ಲೆ ಪ್ರಕರಣದಲ್ಲಿ ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರೊಬ್ಬರ ಪುತ್ರನೂ ಭಾಗಿಯಾಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಾವಿರಾರು ಹಿಂದೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ನಾಪೋಕ್ಲು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ನಾಪೋಕ್ಲು ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದರು.
ಘಟನೆಯ ಗಾಂಭೀರ್ಯವನ್ನು ಅರಿತ ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ತಕ್ಷಣವೇ ನಾಪೋಕ್ಲು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರತಿಭಟನಾ ನಿರತ ಕಾರ್ಯಕರ್ತರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದ ಅವರು, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಘಟನೆಯ ಬೆನ್ನಲ್ಲೇ ಪೊಲೀಸರು ಆರೋಪಿಗಳಾದ ರಶೀದ್, ಸಿದ್ದಿಕ್, ಸುಹೇಲ್ ಮತ್ತು ರಾಫಿ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರು ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಹಲ್ಲೆ ನಡೆಸಿದ ಆರೋಪಿಗಳಾದ ಸಿದ್ದಿಕ್, ಸುಹೇಲ್, ನಾಭಿ ಮತ್ತು ರಶೀದ್ ಎಂಬ ನಾಲ್ವರು ವ್ಯಕ್ತಿಗಳನ್ನು ಈಗಾಗಲೇ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಹಿಂದೂ ಸಂಗಮ ಕಾರ್ಯಕ್ರಮಗಳಿಗೆ ಈ ಘಟನೆಯು ಅಡ್ಡಿಪಡಿಸುವ ಪ್ರಯತ್ನವಾಗಿತ್ತು ಎಂದು ಕಾರ್ಯಕರ್ತರು ದೂರಿದ್ದಾರೆ. ಸದ್ಯ ಪೊಲೀಸರ ತ್ವರಿತ ಕ್ರಮದಿಂದಾಗಿ ಪಟ್ಟಣದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.


