ಕರ್ನಾಟಕದ ರಾಜಕೀಯ ಅಖಾಡದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಬಿರುಕಿನ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ. ವಿಶೇಷವಾಗಿ ಜಿಬಿಎ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ತಮಗೆ ಅನ್ಯಾಯವಾಗಬಹುದು ಎಂಬ ಆತಂಕದಲ್ಲಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಪರ್ಯಾಯ ದಾರಿಯತ್ತ ಚಿತ್ತ ಹರಿಸಿದ್ದಾರೆ. ಸುಮಾರು 85 ರಿಂದ 100 ವಾರ್ಡ್‌ಗಳಲ್ಲಿ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಚುನಾವಣಾ ಕಾರ್ಯತಂತ್ರದ ಭಾಗವಾಗಿ ಜೆಡಿಎಸ್ ಈಗಾಗಲೇ ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಎಂಬ ಎರಡು ವಿಭಿನ್ನ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ. ಒಂದು ವೇಳೆ ಬಿಜೆಪಿ ನಾಯಕರು ಕನಿಷ್ಠ 70 ರಿಂದ 80 ಸೀಟುಗಳನ್ನು ಬಿಟ್ಟುಕೊಡಲು ಒಪ್ಪದಿದ್ದರೆ ಮೈತ್ರಿ ಮುರಿದುಕೊಂಡು ಸ್ವತಂತ್ರವಾಗಿ ಹೋರಾಡಲು ಸಜ್ಜಾಗುವಂತೆ ಹೆಚ್‌ಡಿಕೆ ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಗಳಲ್ಲಿ ಅವರು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲಾ 5 ಪಾಲಿಕೆಗಳ 369 ವಾರ್ಡ್‌ಗಳಲ್ಲಿ ತಯಾರಿ ನಡೆಸುವಂತೆ ಕರೆ ನೀಡಿದ್ದು ಮೈತ್ರಿ ಧರ್ಮ ಪಾಲನೆಯ ಜವಾಬ್ದಾರಿಯನ್ನು ಈಗ ಬಿಜೆಪಿಯ ಅಂಗಳಕ್ಕೆ ತಳ್ಳಿದ್ದಾರೆ.
ಇನ್ನುಳಿದಂತೆ ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳ ಕಾಲಾವಕಾಶ ಬಾಕಿ ಇರುವಾಗಲೇ ಮೈತ್ರಿ ಪಡೆಯಲ್ಲಿ 2028ರ ಮುಖ್ಯಮಂತ್ರಿ ಪಟ್ಟಕ್ಕಾಗಿ ಆಂತರಿಕ ಪೈಪೋಟಿ ಶುರುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು ತಮ್ಮ ತಮ್ಮ ನಾಯಕರೇ ಮುಂದಿನ ಸಿಎಂ ಎಂದು ಹೇಳಿಕೊಳ್ಳುವ ಮೂಲಕ ಮೈತ್ರಿಯಲ್ಲಿ ಕಿಡಿ ಹೊತ್ತಿಸಿದ್ದಾರೆ. ಇತ್ತೀಚೆಗೆ ಹಾಸನದಲ್ಲಿ ಚಲವಾದಿ ನಾರಾಯಣಸ್ವಾಮಿ ಅವರು ನೀಡಿದ ಹೇಳಿಕೆಯು ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಬಹುಮತ ಬಂದ ಪಕ್ಷದವರಿಗೇ ಸಿಎಂ ಸ್ಥಾನ ಎಂಬ ತರ್ಕವು ಜೆಡಿಎಸ್ ಪಾಳಯದಲ್ಲಿ ಆತಂಕ ಮತ್ತು ಅಸಹನೆಯನ್ನು ಸೃಷ್ಟಿಸಿದೆ.

ಇದಕ್ಕೆ ತುಪ್ಪ ಸುರಿಯುವಂತೆ ಬಾಗಲಕೋಟೆಯ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಅವರು 2028ಕ್ಕೆ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿಯಾಗುವುದು ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದಿದ್ದಾರೆ. ಈ ರೀತಿಯ ಬಹಿರಂಗ ಹೇಳಿಕೆಗಳು ಮೈತ್ರಿ ನಾಯಕರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿವೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಂದ ಹಿಡಿದು ವಿಧಾನಸಭೆ ಚುನಾವಣೆಯವರೆಗೂ ಸೀಟು ಹಂಚಿಕೆ ಮತ್ತು ನಾಯಕತ್ವದ ವಿಷಯದಲ್ಲಿ ಉಂಟಾಗಿರುವ ಈ ಗೊಂದಲಗಳು ದೋಸ್ತಿಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿವೆ.


