Top Newsಜಿಲ್ಲೆರಾಜಕೀಯರಾಜ್ಯವೈರಲ್ ನ್ಯೂಸ್ಸುದ್ದಿಹಣಕಾಸು

6000 ಕೋಟಿ ಕಿಕ್‌ಬ್ಯಾಕ್ ಕಿಚ್ಚು;ರಾಜೀನಾಮೆ ಕೊಡಲ್ಲ,ತಾಕತ್ತಿದ್ದರೆ ಸಾಕ್ಷ್ಯ ತನ್ನಿ!

ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 6,000 ಕೋಟಿ ರೂಪಾಯಿಗಳ ಕಿಕ್‌ ಬ್ಯಾಕ್ ನಡೆದಿದೆ ಎಂಬ ಗಂಭೀರ ಆರೋಪ ಕರ್ನಾಟಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿವೆ.

ಫೆಬ್ರವರಿ 3ರಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸದನದಲ್ಲಿ ಪೆನ್‌ಡ್ರೈವ್ ಮತ್ತು ಕರಪತ್ರಗಳನ್ನು ಪ್ರದರ್ಶಿಸಿ, ಸಚಿವರ ಭ್ರಷ್ಟಾಚಾರದ ಬಗ್ಗೆ ಸ್ಫೋಟಕ ದಾಖಲೆಗಳಿವೆ ಎಂದು ಪ್ರತಿಪಾದಿಸಿದರು. ಯಾದಗಿರಿ ಅಬಕಾರಿ ಡಿಸಿ ಜಗದೀಶ್ ನಾಯಕ್ ಅವರು ಬಾರ್ ಲೈಸೆನ್ಸ್ ನೀಡಲು ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಸಚಿವರ ಹೆಸರು ಪ್ರಸ್ತಾಪವಾಗಿರುವುದು ಈ ವಿವಾದಕ್ಕೆ ಮುಖ್ಯ ಕಾರಣವಾಗಿದೆ.

ಆರೋಪಗಳ ಬೆನ್ನಲ್ಲೇ ಮೌನ ಮುರಿದಿರುವ ಸಚಿವ ಆರ್.ಬಿ. ತಿಮ್ಮಾಪುರ, ಯಾವುದೇ ಕಾರಣಕ್ಕೂ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಏನು ತಪ್ಪು ಮಾಡಿದ್ದೇನೆ? ವೈರಲ್ ಆಗಿರುವ ಆಡಿಯೋದಲ್ಲಿ ನನ್ನ ಧ್ವನಿ ಇದೆಯೇ? ಕೇವಲ ಯಾರೋ ನನ್ನ ಹೆಸರು ಹೇಳಿದ ಮಾತ್ರಕ್ಕೆ ನಾನು ರಾಜೀನಾಮೆ ನೀಡಬೇಕೆ?” ಎಂದು ಅವರು ಪ್ರಶ್ನಿಸಿದ್ದಾರೆ. ಲೋಕಾಯುಕ್ತಕ್ಕೆ ದೂರು ನೀಡಿರುವ ವ್ಯಕ್ತಿಯ ಹಿನ್ನೆಲೆಯೇ ಅನುಮಾನಾಸ್ಪದವಾಗಿದೆ ಮತ್ತು ಇದು ಕೇವಲ ತಮ್ಮ ತೇಜೋವಧೆ ಮಾಡುವ ರಾಜಕೀಯ ಪ್ರೇರಿತ ಸಂಚು ಎಂದು ತಿಮ್ಮಾಪುರ ಆಕ್ರೋಶ ಹೊರಹಾಕಿದ್ದಾರೆ. ಭ್ರಷ್ಟಾಚಾರದ ಬಗ್ಗೆ ನೇರ ಸಾಕ್ಷ್ಯ ನೀಡಿದರೆ ಆ ಕ್ಷಣವೇ ಅಧಿಕಾರ ಬಿಟ್ಟು ಕೆಳಗಿಳಿಯುವುದಾಗಿ ಅವರು ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಪ್ರಕರಣವು ಲೋಕಾಯುಕ್ತದ ಮೆಟ್ಟಿಲೇರಿದ್ದು, ತನಿಖೆ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಂದ ಈ ಕುರಿತು ವರದಿ ಕೇಳಿದ್ದು, ಸರ್ಕಾರದ ಮಟ್ಟದಲ್ಲಿಯೂ ಚಟುವಟಿಕೆಗಳು ಚುರುಕುಗೊಂಡಿವೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ ಹಗರಣವು ಕಾಂಗ್ರೆಸ್ ಸರ್ಕಾರದ ಅತಿದೊಡ್ಡ ವೈಫಲ್ಯ ಎಂದು ಬಿಜೆಪಿ ಬಣ್ಣಿಸಿದ್ದರೆ, ಸಚಿವರು ಮಾತ್ರ ತಾವು ನಿರಪರಾಧಿ ಎಂದು ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ.

Comments (0)

Your email address will not be published. Required fields are marked *

Back to top button