‘ಕಮೋಡ್ ಟು ಕಾಂಡೋಮ್’ ವಿವಾದಕ್ಕೆ ಚಂದ್ರಚೂಡ್ ಯು-ಟರ್ನ್; ನಿರ್ಮಾಪಕರ ಸಂಘಕ್ಕೆ ಕ್ಷಮೆ

ಕಮೋಡ್ ಟು ಕಾಂಡೋಮ್’ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸ್ಯಾಂಡಲ್‌ವುಡ್ ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿದ್ದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಈಗ ತಮ್ಮ ಮಾತಿನಿಂದ ಯು-ಟರ್ನ್ ಹೊಡೆದಿದ್ದಾರೆ. ಈ ಹೇಳಿಕೆಯು ಕನ್ನಡ ಚಿತ್ರರಂಗದ ಕುರಿತಾದದ್ದಲ್ಲ, ಬದಲಿಗೆ ತಮಿಳು ಚಿತ್ರರಂಗ ಮತ್ತು ಅಲ್ಲಿನ ರಾಜಕೀಯ ವ್ಯವಸ್ಥೆಯ ಬಗ್ಗೆ ನೀಡಿದ್ದ ಹೇಳಿಕೆಯಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹೇಳಿಕೆಯನ್ನು ಪೂರ್ಣವಾಗಿ ನೋಡದೆ, ಕೇವಲ ಒಂದು ಭಾಗದ ವಿಡಿಯೋವನ್ನು ಕಟ್ ಮಾಡಿ ಹರಿಬಿಡಲಾಗಿದೆ. ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಅಲ್ಲಿನ ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ ಹೊರತು, ಕನ್ನಡ ನಿರ್ಮಾಪಕರ ಬಗ್ಗೆ ಅಲ್ಲ ಎಂದು ಚಂದ್ರಚೂಡ್ ಸಮರ್ಥಿಸಿಕೊಂಡಿದ್ದಾರೆ.ತಮ್ಮ ಮಾತಿನಿಂದ ಕನ್ನಡದ ನಿರ್ಮಾಪಕರಿಗೆ ನೋವಾಗಿದ್ದರೆ ಅದಕ್ಕಾಗಿ ಕ್ಷಮೆ ಕೋರುವುದಾಗಿ ತಿಳಿಸಿರುವ ಅವರು, ಈಗಾಗಲೇ ನಿರ್ಮಾಪಕರ ಸಂಘದ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಹಿರಿಯ ನಿರ್ಮಾಪಕ ಕೆ. ಮಂಜು ಅವರ ವಿರುದ್ಧ ಚಂದ್ರಚೂಡ್ ಕಿಡಿಕಾರಿದ್ದಾರೆ. ನನ್ನ ಸ್ಪಷ್ಟನೆ ಕೇಳುವ ಬದಲು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿರುವುದು ಸರಿಯಲ್ಲ ಎಂದಿರುವ ಅವರು, ಇನ್ಮುಂದೆ ಮಂಜಣ್ಣ ಎಂಬ ಗೌರವ ನೀಡುವುದಿಲ್ಲ, ಬದಲಿಗೆ ‘ಕೊಬ್ಬರಿ ಮಂಜಾ’ ಎಂದು ಏಕವಚನದಲ್ಲೇ ಕರೆಯುವುದಾಗಿ ಆಕ್ರೋಶ ಹೊರಹಾಕಿದ್ದಾರೆ.ಚಿತ್ರರಂಗದ ತಾಂತ್ರಿಕ ವರ್ಗ ಮತ್ತು ಲೈಟ್ ಬಾಯ್ಸ್ ಪೇಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಆ ರೀತಿ ಮಾತನಾಡಿದ್ದಾಗಿ ಹೇಳಿರುವ ಚಂದ್ರಚೂಡ್, ಈಗ ಈ ವಿಚಾರವು ಕಾನೂನು ಮತ್ತು ವೈಯಕ್ತಿಕ ವಾಕ್ಸಮರದ ಹಂತಕ್ಕೆ ತಲುಪಿದೆ.




