
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಭೀಕರ ದುರಂತವೊಂದು ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನಲೆ ಅತ್ತೆಯ ಕಿರುಕುಳದಿಂದ ಮನನೊಂದ ಗೃಹಿಣಿ ರೂಪಾ ಹನುಮಂತಗೌಡರ (27), ತನ್ನ ಮೂವರು ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) ಅವರನ್ನು ಮನೆಯ ನೇಣು ಬಿಗಿದಿದ್ದಾರೆ.
ಮಕ್ಕಳನ್ನು ಕೊಂದ ನಂತರ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಅತ್ತೆ-ಸೊಸೆ ಜಗಳಕ್ಕೆ ಮೂರು ಕಂದಮ್ಮಗಳ ದಾರುಣ ಅಂತ್ಯ:ಈ ದಾರುಣ ಘಟನೆಗೆ ಅತ್ತೆ ರೇಣವ್ವ ನೀಡುತ್ತಿದ್ದ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 2018ರಲ್ಲಿ ಹನುಮಂತ ಗೌಡರ ಎಂಬುವವರನ್ನು ಮದುವೆಯಾಗಿದ್ದ ರೂಪಾ, ಸುಂದರ ಸಂಸಾರದ ಕನಸು ಕಂಡಿದ್ದರು. ಆದರೆ ಮದುವೆಯಾದ ದಿನದಿಂದಲೂ ಅತ್ತೆ-ಸೊಸೆಯ ನಡುವಿನ ಜಗಳ ವಿಕೋಪಕ್ಕೆ ಹೋಗಿತ್ತು. ಕೊನೆಗೆ ಜೀವನದಲ್ಲಿ ಜಿಗುಪ್ಸೆಗೊಂಡ ರೂಪಾ, ಮಕ್ಕಳನ್ನಾದರೂ ಸುಖವಾಗಿರಲು ಬಿಡದೆ ಅವರನ್ನೂ ತನ್ನೊಂದಿಗೆ ಕರೆದೊಯ್ಯಲು ನಿರ್ಧರಿಸಿ ಈ ಘೋರ ಕೃತ್ಯ ಎಸಗಿದ್ದಾರೆ. ಇಡೀ ಹಿರೇಮುಚ್ಚಳಗುಡ್ಡ ಗ್ರಾಮ ಈಗ ಸೂತಕದ ಛಾಯೆಯಲ್ಲಿ ಮುಳುಗಿದ್ದು, ಮುಗ್ಧ ಮಕ್ಕಳ ಸಾವಿಗೆ ಕಂಬನಿ ಮಿಡಿದಿದೆ.




