Top Newsರಾಜಕೀಯರಾಜ್ಯಸುದ್ದಿಹಣಕಾಸು

ಬಜೆಟ್‌ನಲ್ಲಿಅನ್ಯಾಯವಾಗಿಲ್ಲ;ಕಾಂಗ್ರೆಸ್ ಟೀಕೆಗಳಿಗೆ ಹೆಚ್‌ಡಿಕೆ ತಿರುಗೇಟು

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಬೆಂಬಲಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಈ ಬಜೆಟ್ ಕರ್ನಾಟಕದ ಪಾಲಿಗೆ ವರದಾನವಾಗಿದ್ದು, ರಾಜ್ಯಕ್ಕೆ ಸಿಗುವ ತೆರಿಗೆ ಪಾಲಿನಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ ಸರ್ಕಾರದ ಆರೋಪ ಸುಳ್ಳೆಂದು ಹೇಳಿರುವ ಕುಮಾರಸ್ವಾಮಿ, 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶೇ 3.64ರಷ್ಟು ತೆರಿಗೆ ಪಾಲು ನೀಡಿತ್ತು, ಆದರೆ ಈಗ 16ನೇ ಹಣಕಾಸು ಆಯೋಗವು ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. ಇದರ ಫಲವಾಗಿ 2026-27ನೇ ಸಾಲಿನಲ್ಲಿ ಕರ್ನಾಟಕಕ್ಕೆ ಬರೋಬ್ಬರಿ 63,049 ಕೋಟಿ ರೂ. ತೆರಿಗೆ ಪಾಲು ದೊರೆಯಲಿದೆ. ಇದು ರಾಜ್ಯದ ಆರ್ಥಿಕತೆಗೆ ದೊಡ್ಡ ಬಲ ತುಂಬಲಿದ್ದು, ಇನ್ನು ಮುಂದೆಯಾದರೂ ರಾಜ್ಯ ಸರ್ಕಾರ ಕೇಂದ್ರವನ್ನು ಟೀಕಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನೀಡಿರುವ ಆದ್ಯತೆಯನ್ನು ಶ್ಲಾಘಿಸಿರುವ ಅವರು, ತೆಂಗು ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ ಯೋಜನೆ, ಗೋಡಂಬಿ ಮತ್ತು ಕೋಕೋ ಉತ್ಪನ್ನಗಳನ್ನು 2030ರ ವೇಳೆಗೆ ಜಾಗತಿಕ ಬ್ರಾಂಡ್ ಆಗಿ ರೂಪಿಸುವ ಗುರಿ ಹೊಂದಿರುವುದು ರಾಜ್ಯದ ಹಲವಾರು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ವಿಶೇಷವಾಗಿ ಶ್ರೀಗಂಧದ ಬೆಳೆಗೆ ನೀಡಿರುವ ಉತ್ತೇಜನವು ಕರ್ನಾಟಕದ ಅಸ್ಮಿತೆಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈಲ್ವೆ ಸಾರಿಗೆ ಕ್ಷೇತ್ರದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆಯು ರಾಜ್ಯಕ್ಕೆ ವರದಾನವಾಗಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಹೈದರಾಬಾದ್-ಬೆಂಗಳೂರು ಮತ್ತು ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಯೋಜನೆಗಳು ರಾಜ್ಯದ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿವೆ. ವಂದೇ ಭಾರತ್ ರೈಲುಗಳ ಯಶಸ್ಸಿನ ನಂತರ ಹೈಸ್ಪೀಡ್ ರೈಲುಗಳು ಬರುತ್ತಿರುವುದು ‘ವಿಕಸಿತ ಭಾರತ’ದ ಗುರಿ ತಲುಪಲು ಸಹಕಾರಿಯಾಗಿದೆ. ಇದು ಕೇವಲ ಅಂಕಿ-ಅಂಶಗಳ ಬಜೆಟ್ ಅಲ್ಲ, ಬದಲಾಗಿ 2047ರ ಗುರಿ ತಲುಪಲು ಪ್ರಧಾನಿ ಮೋದಿ ಅವರು ನೀಡಿದ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಕುಮಾರಸ್ವಾಮಿ ಕೊಂಡಾಡಿದ್ದಾರೆ.

Comments (0)

Your email address will not be published. Required fields are marked *

Back to top button