
ಕೇಂದ್ರ ಬಜೆಟ್ 2026-27ರಲ್ಲಿ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಭಾರತವು ಜಾಗತಿಕವಾಗಿ ಹಿಂದೆ ಸರಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ವಿ. ಸೋಮಣ್ಣ ಅವರು ವಿಫಲರಾಗಿದ್ದಾರೆ ಎಂದು ಟೀಕಿಸಿದ ಅವರು, ರಾಜ್ಯಕ್ಕೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಈ ಇಬ್ಬರು ನಾಯಕರು ರಾಜ್ಯದ ಜನರಿಗೆ ಹೇಗೆ ಮುಖ ತೋರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ರೈಲ್ವೆ ಯೋಜನೆಗಳ ಕುರಿತು ಮಾತನಾಡಿದ ಅವರು, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆಯಾಗಿರುವುದು ಸ್ವಾಗತಾರ್ಹವಾದರೂ, ಇದರಿಂದ ಕರ್ನಾಟಕಕ್ಕೆ ಸಿಗುವ ಲಾಭ ಅತ್ಯಲ್ಪ. ಈ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದ ವ್ಯಾಪ್ತಿಯಲ್ಲಿ ಕೇವಲ ನೂರು ಕಿಲೋಮೀಟರ್ ಕೂಡ ಓಡುವುದಿಲ್ಲ , ಇದರ ಬದಲು ಬೆಂಗಳೂರು ಮತ್ತು ಪುಣೆ ನಡುವೆ ಹೈಸ್ಪೀಡ್ ಕಾರಿಡಾರ್ ನಿರ್ಮಿಸಬೇಕೆಂದು ರಾಜ್ಯ ಸರ್ಕಾರವು ಈ ಹಿಂದೆಯೇ ಒತ್ತಾಯಿಸಿತ್ತು. ಈ ಬೇಡಿಕೆಯನ್ನು ಪರಿಗಣಿಸದೇ ಇರುವುದು ರಾಜ್ಯದ ಆರ್ಥಿಕ ಮತ್ತು ಸಾರಿಗೆ ವ್ಯವಸ್ಥೆಗೆ ಹಿನ್ನಡೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ 5,600 ಕೋಟಿ ರೂಪಾಯಿಗಳ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎನ್ನುವುದು ರಾಜ್ಯದ ನ್ಯಾಯಬದ್ಧ ಬೇಡಿಕೆಯಾಗಿತ್ತು. ಆದರೆ ಬಜೆಟ್‌ನಲ್ಲಿ ಈ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ರೈತ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ. ರಾಜ್ಯಕ್ಕೆ ಎರಡು ರಕ್ಷಣಾ ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡಬೇಕೆಂಬ ಮನವಿಯನ್ನೂ ನಿರ್ಮಲಾ ಸೀತಾರಾಮನ್ ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಂದ್ರದ ಕೆಲವು ನೂತನ ಯೋಜನೆಗಳು ಕರ್ನಾಟಕದ ‘ಕ್ವೀನ್ ಸಿಟಿ’ ಮಾದರಿಯಿಂದ ಪ್ರೇರಿತವಾಗಿವೆ ಎಂದು ಲೇವಡಿ ಮಾಡಿದರು. ರಾಜ್ಯ ಸರ್ಕಾರವು ಈಗಾಗಲೇ 5,000 ಎಕರೆಯಲ್ಲಿ ಜಾರಿಗೊಳಿಸುತ್ತಿರುವ ಕ್ವೀನ್ ಸಿಟಿ ಯೋಜನೆಯಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳು ಮತ್ತು ಆಸ್ಪತ್ರೆಗಳು ಬರಲಿವೆ. ಈಗ ಕೇಂದ್ರ ಸರ್ಕಾರ ಘೋಷಿಸಿರುವ ವಿಶ್ವವಿದ್ಯಾಲಯ ಟೌನ್‌ಶಿಪ್ ಮತ್ತು ಪ್ರಾದೇಶಿಕ ವೈದ್ಯಕೀಯ ಪ್ರವಾಸೋದ್ಯಮ ಹಬ್‌ಗಳು ನಮ್ಮ ಪರಿಕಲ್ಪನೆಯ ಪ್ರತಿಫಲನವೇ ಆಗಿವೆ. ಒಟ್ಟಾರೆಯಾಗಿ, ಅತಿ ಹೆಚ್ಚು ತೆರಿಗೆ ನೀಡುತ್ತಿರುವ ಕರ್ನಾಟಕಕ್ಕೆ ಅನುದಾನ ಮತ್ತು ಯೋಜನೆಗಳ ಹಂಚಿಕೆಯಲ್ಲಿ ಮೋದಿ ಸರ್ಕಾರವು ತಾರತಮ್ಯ ಎಸಗಿದೆ ಎಂದು ಎಂ.ಬಿ. ಪಾಟೀಲ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.




