ರಾಜ್ಯಸುದ್ದಿ

ನಾಯಿಮರಿ ಎಷ್ಟು ಎಳೆದ್ರೂ ಲಿಫ್ಟ್ ಒಳಗೆ ಬಂದಿಲ್ಲ ಎಂದು ಕೊಲೆ: ಮನೆ ಕೆಲಸದಾಕೆ ಅರೆಸ್ಟ್

ಬೆಂಗಳೂರು: ಮನೆ ಕೆಲಸದಾಕೆ ಸಾಕಿದ ನಾಯಿ ಮರಿಯನ್ನು ನೆಲಕ್ಕೆ ಬಡಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಬಾಗಲೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕೃತ್ಯವೆಸಗಿದ ಮನೆ ಕೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ..

ಪುಷ್ಪಲತಾ ಬಂಧಿತ ಮನೆಕೆಲಸದಾಕೆ. ಶ್ವಾನದ ಮಾಲೀಕರ ದೂರಿನ ಮೇರೆಗೆ ಪೊಲೀಸರು ಪುಷ್ಪಲತಾರನ್ನು ಬಂಧಿಸಿದ್ದಾರೆ. ರಾಶಿಕಾ ಎಂಬವರು ತಮ್ಮ ಗೂಸಿ ಹೆಸರಿನ ನಾಯಿಯನ್ನು ನೋಡಿಕೊಳ್ಳಲು ಪುಷ್ಪಲತಾಳನ್ನು ಮನೆ ಕೆಲಸದಾಕೆಯಾಗಿ ನೇಮಿಸಿಕೊಂಡಿದ್ದರು. ಇದಕ್ಕಾಗಿ ಪುಷ್ಪಲತಾಳಿಗೆ ಮಾಸಿಕ 23 ಸಾವಿರ ರೂ. ಸಂಬಳವನ್ನೂ ನೀಡುತ್ತಿದ್ದರು.

ಆದರೆ ಪುಷ್ಪಲತಾ ಲಿಫ್ಟ್‌ನಲ್ಲಿ ನಾಯಿಯನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಳು. ಬಟ್ಟೆ ಒಗೆಯುವಂತೆ ನಾಯಿಯನ್ನು ಹಿಡಿದು ನೆಲಕ್ಕೆ ಬಡಿದು ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಈ ಕೃತ್ಯದ ನಂತರ ನಾಯಿ ಸತ್ತು ಹೋಗಿದೆ ಎಂದು ಮಾಲೀಕರಿಗೆ ಸುಳ್ಳು ಕಥೆ ಹೇಳಿ ಆಕೆಯನ್ನು ನಂಬಿಸಲು ಯತ್ನಿಸಿದ್ದಾಳೆ. ನಾಯಿಯ ಸಾವಿನ ಬಗ್ಗೆ ಮಾಲೀಕರಿಗೆ ಅನುಮಾನ ಮೂಡಿದ್ದು, ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪುಷ್ಪಲತಾಳ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಾಯಿಯನ್ನ ಎಷ್ಟು ಎಳೆದ್ರೂ ಲಿಫ್ಟ್ ಒಳಗೆ ಬರಲಿಲ್ಲ. ಹೀಗಾಗಿ ಕೋಪಗೊಂಡು ನೆಲಕ್ಕೆ ಬಡಿದಿದ್ದಾಗಿ ಆರೋಪಿತೆ ಪುಷ್ಪಲತಾ ಹೇಳಿದ್ದಾಳೆ.

Comments (0)

Your email address will not be published. Required fields are marked *

Back to top button