ರಾಜಕೀಯ

ಸಿಎಂ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ಅನೂರ್ಜಿತ – ಹೈಕೋರ್ಟ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವುದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ. ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ್‌ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠ ತಿರಸ್ಕರಿಸಿದೆ.

ಮುಖ್ಯಮಂತ್ರಿ ಪರ ವಕೀಲರ ವಾದ ಏನು?

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ 11 ಆರೋಪಗಳನ್ನು ಮಾಡಲಾಗಿದೆ. ಈ ಪೈಕಿ ಚುನಾವಣಾ ವೆಚ್ಚದ ಬಗ್ಗೆ ಪ್ರಮುಖ ಆರೋಪ ಮಾಡಲಾಗಿದೆ. ನಾನು ಸಿಎಂ ಆದ ಬಳಿಕ ಆರೋಪಗಳನ್ನು ಸೃಷ್ಟಿ ಮಾಡಲಾಗಿದೆ. ಅರ್ಜಿದಾರರು ನ್ಯಾಯಾಲಯವನ್ನು ಮಾತ್ರ ದಾರಿ ತಪ್ಪಿಸುತ್ತಿಲ್ಲ. ಇಡೀ ಜಗತ್ತನ್ನು ದಾರಿ ತಪ್ಪಿಸಿದ್ದಾರೆ. ನಾನು ಎಷ್ಟು ವೆಚ್ಚ ಮಾಡಿದ್ದೇನೆ ಎಂಬುದು ಮುಖ್ಯವಾಗುತ್ತದೆ. ಅದನ್ನು ಉಲ್ಲೇಖಿಸಿಲ್ಲ. ಗ್ಯಾರಂಟಿಗಳನ್ನು ಒಳಗೊಂಡ ಪ್ರಣಾಳಿಕೆ ಪಕ್ಷಕ್ಕೆ ಸೇರಿದ್ದು, ಇದನ್ನು ನನ್ನ ವೆಚ್ಚಕ್ಕೆ ಸೇರಿಸಬಹುದೇ? ಗ್ಯಾರಂಟಿ ಯೋಜನೆ ಘೋಷಿಸಲಾಗಿದೆ ಎಂದು ಸಿದ್ದರಾಮಯ್ಯ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ವಾದ ಮಂಡಿಸಿದ್ರು. ಇದು ನನ್ನ ಚುನಾವಣಾ ವೆಚ್ಚಕ್ಕೆ ಸೇರುತ್ತದೆಯೇ, ನಾನು ಮುಖ್ಯಮಂತ್ರಿಯಾದ ಮೇಲೆ ಇದು ಅನ್ವಯಿಸುವುದೇ? ಎಂದು ಪ್ರಶ್ನಿಸಿದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ದುರುದ್ದೇಶಪೂರಿತವಾದ ಆರೋಪ ಮಾಡಲಾಗಿದೆ. ಇದು ದ್ವೇಷದಿಂದ ಕೂಡಿದ ಆರೋಪವಾಗಿದೆ. ಸೂಕ್ತ ಮತ್ತು ನಿರ್ದಿಷ್ಟ ವಿಚಾರ ಒಳಗೊಂಡಿರದ ಇದನ್ನು ಚುನಾವಣಾ ಅರ್ಜಿ ಎನ್ನಬಹುದೇ? ಯಾವುದೇ ಪರಿಶೀಲನೆ ಇಲ್ಲ. ಅಫಿಡವಿಟ್‌ ಇಲ್ಲ. ವಾಸ್ತವಿಕ ಅಂಶಗಳನ್ನು ಅಡಕಗೊಳಿಸಬೇಕಿತ್ತು. ಆದರೆ, ಸುಳ್ಳುಗಳನ್ನು ಅರ್ಜಿಯಲ್ಲಿ ತುಂಬಿದ್ದಾರೆ ಎಂದು ಟೀಕಿಸಿದ್ದರು.

ಚುನಾವಣಾ ತಕರಾರು ಅರ್ಜಿಗಳು ನಕಲು ಮಾಡುವಂತಹ ಅರ್ಜಿಗಳಲ್ಲ. ಅವುಗಳನ್ನು ರೂಪಿಸಲು ಗಂಭೀರ ಸಿದ್ದತೆ ಮಾಡಬೇಕು. ಆದರೆ, ಶಾಸಕರಾದ ರಿಜ್ವಾನ್​ ಅರ್ಷದ್​, ಸಚಿವ ಪ್ರಿಯಾಂಕ್‌ ಖರ್ಗೆ ಅಸಿಂಧು ಕೋರಿರುವ ಅರ್ಜಿಗಳಿಂದ ಈ ಅರ್ಜಿಯನ್ನು ಸಂಪೂರ್ಣ ನಕಲು ಮಾಡಲಾಗಿದೆ. ಮತ್ತೊಂದು ಅರ್ಜಿಯಲ್ಲಿರುವ ಅಲ್ಪ ವಿರಾಮ, ಪೂರ್ಣವಿರಾಮ ಮತ್ತು ವ್ಯಾಕರಣ ದೋಷಗಳು ಈ ಅರ್ಜಿಯಲ್ಲಿಯೂ ಯಥಾವತ್ತಾಗಿವೆ. ಇದಕ್ಕಾಗಿ ಅರ್ಜಿದಾರರ ವಿರುದ್ದ ಕ್ರಮವಾಗಬೇಕು. ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಉಲ್ಲೇಖಿಸುವ ಅಂಶಗಳು ಭವಿಷ್ಯದಲ್ಲಿ ರಚನೆಯಾಗುವ ಸರ್ಕಾರದ ಭರವಸೆಗಳೇ ವಿನಾ ಅಭ್ಯರ್ಥಿಯ ವೈಯಕ್ತಿಕ ಭರವಸೆಗಳಲ್ಲ. ಪ್ರಣಾಳಿಕೆಯಲ್ಲಿನ ಭರವಸೆಗಳು ಚುನಾವಣಾ ಅಕ್ರಮ ಎನ್ನಲಾಗದು ಸಿಎಂ ಪರ ವಕೀಲರು ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಾದ ಏನು..?

ಗ್ಯಾರಂಟಿ ಯೋಜನೆಗಳು ಮೂಲಭೂತ ಹಕ್ಕುಗಳು ಮತ್ತು ಸಂವಿಧಾನದ ನಿರ್ದೇಶಕ ತತ್ವಗಳಿಗೆ ವಿರುದ್ಧವಾಗಿವೆ. ಆ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯು ನೋಂದಾಯಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಪಕ್ಷದ ಪ್ರಣಾಳಿಕೆ ಅಲ್ಲ. ಅದು ಕೆಪಿಸಿಸಿಯ ಪ್ರಣಾಳಿಕೆಯಾಗಿದೆ. ಕೆಪಿಸಿಸಿಯು ನೋಂದಾಯಿತ ಪಕ್ಷವಲ್ಲ. ಹೀಗಾಗಿ, ಅದರ ಹೆಸರಿನಲ್ಲಿ ರೂಪಿಸಿರುವ ಪ್ರಣಾಳಿಕೆಯು ಭ್ರಷ್ಟಾಚಾರಕ್ಕೆ ಸಮ. ಗ್ಯಾರಂಟಿ ಯೋಜನೆಗಳ ಕಾರ್ಡ್‌ಗೆ ಸಹಿ ಮಾಡಿರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ ಪ್ರಣಾಳಿಕೆ ರೂಪಿಸಿ, ಪ್ರಚಾರ ಮಾಡಿದ್ದಾರೆ. ಆ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಹೀಗಾಗಿ, ಅವರ ಆಯ್ಕೆ ಅನೂರ್ಜಿತಗೊಳಿಸಬೇಕು. ಭ್ರಷ್ಟಾಚಾರದ ಮೂಲಕ ಚುನಾವಣೆ ಜಯಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಅರ್ಜಿದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದ್ರು

Comments (0)

Your email address will not be published. Required fields are marked *

Back to top button