ರಾಜಕೀಯ

ನಾಯಕತ್ವ ಕೊರತೆ ಮುಚ್ಚಿಹಾಕಲು ಜನಾಕ್ರೋಶ ಯಾತ್ರೆ : ಡಿಕೆ ಶಿವಕುಮಾರ್​

ಬೆಂಗಳೂರು : ಮಿತ್ರ ಪಕ್ಷಗಳ ಆಂತರಿಕ ಕಚ್ಚಾಟ ಹಾಗೂ ನಾಯಕತ್ವ ಕೊರತೆಯನ್ನು ಮುಚ್ಚಿ ಹಾಕಲು ಬಿಜೆಪಿಯವರು ಜನಾಕ್ರೋಶ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆಯೇ ಹೊರತು ಜನರಿಗಾಗಿ ಅಲ್ಲ ಎಂದು ಡಿಕೆ ಶಿವಕುಮಾರ್​ ಹೇಳಿದರು.ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ  ಕೆಪಿಸಿಸಿ ವತಿಯಿಂದ ಫ್ರೀಡಂ ಪಾರ್ಕ್​ನಲ್ಲಿ ರಾಜ್ಯ ಮಟ್ಟದ  ಪ್ರತಿಭಟನೆಯಲ್ಲಿ ಡಿಕೆ ಶಿವಕುಮಾರ್​ ಹೇಳಿಕೆ.

ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ರೈತ ವಿರೋಧಿಗಳು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹಾಲಿನ ದರ ಕರ್ನಾಟಕದಲ್ಲೇ ಕಡಿಮೆ.‌ ಸಿಮೆಂಟ್, ಕಬ್ಬಿಣ, ಎಣ್ಣೆ, ಟೂಥ್‌ಪೇಸ್ಟ್‌‌‌, ಮೊಟ್ಟೆ ಹೀಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಬಿಜೆಪಿ. ಚಿನ್ನದ ಬೆಲೆ 90,000 ರೂ. ಗಡಿ ದಾಟಿದ್ದು, ಕಳೆದ 11 ವರ್ಷಗಳಿಂದ ಮಧ್ಯಮ ವರ್ಗದ ಹೆಣ್ಣುಮಕ್ಕಳು ಚಿನ್ನ ಧರಿಸಲಾಗುತ್ತಿಲ್ಲ. ಹೀಗಾಗಿ ಜನಾಕ್ರೋಶ ಬಿಜೆಪಿ ಸರ್ಕಾರದ ವಿರುದ್ಧವೇ ಆಗಬೇಕಿದೆ.

ಭ್ರಷ್ಟ ಬಿಜೆಪಿ ವಿರುದ್ಧ ಹೋರಾಟವನ್ನು ಮಾಡಿ, 2028ರಲ್ಲಿ ಮತ್ತೆ ‘ನಿಮ್ಮ ಸರ್ಕಾರ’ ಅಧಿಕಾರಕ್ಕೆ ಬರಲಿದೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು.

ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಉತ್ತಮ ಆಡಳಿತವನ್ನು ನೀಡುತ್ತಿದೆ.‌ ನಮ್ಮದು ರೈತ ಪರ, ಕಾರ್ಮಿಕ ಪರ, ಎಲ್ಲಾ ವರ್ಗದ ಜನರ ಪರ ಇರುವ ಸರ್ಕಾರ. ಕಾಮಾಲೆ ಕಣ್ಣಲ್ಲಿ ನೋಡುವುದು ಬಿಟ್ಟು, ಆತ್ಮಸಾಕ್ಷಿಯ ಒಳಗಣ್ಣನ್ನು ತೆರೆದು ನೋಡಿ; ನಮ್ಮ ಸರ್ಕಾರದ ಪ್ರತಿಯೊಂದು ಕೆಲಸಗಳೂ ಅಭಿವೃದ್ಧಿ ಪರವಾಗಿದೆ. ಬಿಜೆಪಿಯ ಬೆಲೆ ಏರಿಕೆ ನೀತಿಯನ್ನು ತಡೆದು, ಜನರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾಗುತ್ತಿವೆ.

ಈ ವೇಳೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಮಯೂರ್ ಜೈಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ  ಜಿಸಿ ಚಂದ್ರಶೇಖರ್, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣಭೈರೇಗೌಡ, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಹೆಚ್.ಸಿ ಮಹದೇವಪ್ಪ, ಚಲುವರಾಯಸ್ವಾಮಿ, ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಬೋಸರಾಜು, ದರ್ಶನಾಪುರ್, ಎಂ.ಸಿ ಸುಧಾಕರ್, ಭೈರತಿ ಸುರೇಶ್, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರಾದ ಬಿ.ವಿ, ಶ್ರೀನಿವಾಸ್, ಎಂಎಲ್ ಸಿ ನಾರಾಯಣಸ್ವಾಮಿ, ನಾಗರಾಜ್ ಯಾದವ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿಂದ್ದರು..

Comments (0)

Your email address will not be published. Required fields are marked *

Back to top button