Top Newsರಾಜಕೀಯರಾಜ್ಯಸುದ್ದಿ

ಹಾಸನ ಸಮಾವೇಶ: ಸಿದ್ದರಾಮಯ್ಯ ಜೊತೆಗೆ ಈ ಬಂಡೆ ಸದಾ ಇರುತ್ತೆದೆ:ಡಿಕೆ ಶಿವಕುಮಾರ್

ಹಾಸನ: ಈ ಬಂಡೆ ಯಾವತ್ತಿದ್ದರೂ ಸಿದ್ದರಾಮಯ್ಯನವರ ಜತೆ ಇರುತ್ತೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಲೂ ಅವರ ಜತೆ ಇರುತ್ತೇನೆ, ನಾಳೆನೂ ಇರುತ್ತೇನೆ, ಸಾಯುವವರೆಗೂ ಅವರ ಜತೆ ಇರುತ್ತೇನೆ. ನೀವು ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು  ಸಿಎಂ ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಭರವಸೆ ನೀಡಿದರು.

ಇಂದು ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಸಮಿತಿಯ ಆಶ್ರಯದಲ್ಲಿ ನಡೆದ ಬೃಹತ್‌ ಜನಕಲ್ಯಾಣ ಸಮಾವೇಶ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಎಲ್ಲಿ ಇರುತ್ತೇನೆ ಅಲ್ಲಿ ಪ್ರಾಮಾಣಿಕವಾಗಿಯೇ ಇರುತ್ತೇನೆ. ಈ ಹಾಸನದ ಇತಿಹಾಸ ನೋಡಿದರೆ ನೋವಾಗುತ್ತೆ. ಹಲವು ಕುಟುಂಬಗಳು ನೋವು ಅನುಭವಿಸಿವೆ. ಹಾಸನಾಂಬೆ ಆ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಬೇಕು ಎಂದರು.

ಈ ಜಿಲ್ಲೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶಗೊಂಡು, ನೊಂದ ತಾಯಂದಿರಿಗೆ ಧೈರ್ಯ ತುಂಬಲು ಹಾಸನ ಜಿಲ್ಲೆಯ ಜನ ಸಂಸದ ಶ್ರೇಯಸ್ ಪಟೇಲ್ ಅವರಿಗೆ ಆರ್ಶೀವಾದ ಮಾಡಿದ್ದಾರೆ ಎಂದರು.

ಹಾಸನದ ಮಾಜಿ ಸಂಸದರ ಬಗ್ಗೆ ಮಾತನಾಡಲು ಅಸಹ್ಯವಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಉಪ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಿದ್ದಾರೆ. ಜಿಲ್ಲೆಯ ತಾಯಂದಿರ ಸ್ವಾಭಿಮಾನ ಉಳಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಿದ್ದೇವೆ ಎಂದು ಡಿಸಿಎಂ ಹೇಳಿದರು.

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರೂ ಅಧಿಕಾರಕ್ಕೆ ಬಂದಂತೆ. ನಮ್ಮ ಗ್ಯಾರಂಟಿಗಳ ಶಕ್ತಿಯಿಂದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅದ್ವಿತೀಯ ಗೆಲುವು ಸಾಧಿಸಿದೆ. ಇದು ಕೇವಲ ಜನಕಲ್ಯಾಣ ಸಮಾವೇಶವಲ್ಲ, ಗ್ಯಾರಂಟಿಗಳ ಗೆಲುವಿನ ಸಮಾವೇಶವಾಗಿದೆ. ಕಾಂಗ್ರೆಸ್ ಪಕ್ಷ ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ ಎಂದರು.

Comments (0)

Your email address will not be published. Required fields are marked *

Back to top button