Top Newsರಾಜಕೀಯರಾಜ್ಯಸುದ್ದಿ

ಹೈಕಮಾಂಡಿಗೆ ನನ್ನ ವೀಕ್ನೆಸ್ ಮತ್ತು ಬಲ ಏನು ಎನ್ನುವುದು ಗೊತ್ತಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಹಾಸನದಲ್ಲಿ ಡಿಸೆಂಬರ್ 5 ರಂದು ಕಾಂಗ್ರೆಸ್ ಆಯೋಜಿಸಿರುವ ಸಮಾವೇಶದ ಹೆಸರನ್ನು ಬದಲಾಯಿಸಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ಎಂದು ಹೆಸರಿಡಲಾಗಿತ್ತು. ಇದೀಗ ಜನ ಕಲ್ಯಾಣ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಪಕ್ಷದ ಬ್ಯಾನರ್ ಹಾಗೂ ತಮ್ಮ ನಾಯಕತ್ವದಲ್ಲಿಯೇ ಸಮಾವೇಶ ನಡೆಯಲಿದೆ. ಇದು ಕಾಂಗ್ರೆಸ್ ಕಾರ್ಯಕ್ರಮವಾಗಿದ್ದು, ಪಕ್ಷ ಹಾಗೂ ನನ್ನ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.

ನನ್ನ ಸಹೋದರನ ಸೋಲನ್ನು ಇನ್ನೂ ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿರುವ ಡಿಕೆಶಿ, ಎಲ್ಲರೂ ಒಟ್ಟಾಗಿ ನನ್ನ ತಮ್ಮನನ್ನು ಸೋಲಿಸಿದರು. ಆದರೂ, ಈ ಸೋಲಿನ ಬಗ್ಗೆ ನನಗೆ ಸಂಶಯವಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

“ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಒಡಂಬಡಿಕೆಯಾಗಿದೆ, ಅದು ಏನು ಎನ್ನುವುದನ್ನು ಸದ್ಯದ ಮಟ್ಟಿಗೆ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸಮಯ ಸಂದರ್ಭ ಬಂದಾಗ ವಿವರಿಸುತ್ತೇನೆ. ಆ ಅವಕಾಶ ನನಗೆ ಸಿಗಬಹುದು ಎಂದು ನಾನು ನಂಬಿದ್ದೇನೆ ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಂದರ್ಶನದಲ್ಲಿ ಮಾತನಾಡುತ್ತಿದ್ದ ಡಿಕೆಶಿ, ಉಪ ಮುಖ್ಯಮಂತ್ರಿ ಹುದ್ದೆಯನ್ನು ಬಯಸುವುದು ತಪ್ಪಲ್ಲ, ಹೆಚ್ಚುವರಿ ಸ್ಥಾನವಿರುವುದೂ ತಪ್ಪಲ್ಲ, ಆದರೆ ಡಿಸಿಎಂ ಕುರ್ಚಿ ಈಗ ಖಾಲಿಯಿಲ್ಲ. ಕೆಲವೊಮ್ಮೆ ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

“ನನ್ನ ವೀಕ್ನೆಸ್ ಮತ್ತು ಬಲ ಏನು ಎನ್ನುವುದು ನನಗೆ ಗೊತ್ತಿದೆ. ಪಕ್ಷ ಇದುವರೆಗೆ ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವುದು ನನ್ನ ಬಲ. ನಾನು ಯಾವತ್ತೂ, ಯಾವ ವಿಚಾರಕ್ಕೂ ಹೈಕಮಾಂಡಿಗೆ ಬ್ಲ್ಯಾಕ್ ಮೇಲ್ ಮಾಡಿಲ್ಲ, ಇದು ನನ್ನ ವೀಕ್ನೆಸ್” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಾನು ಯಾವತ್ತೂ ಪಕ್ಷ ವಿರೋಧಿ ಕೆಲಸವನ್ನು ಮಾಡಿಲ್ಲ, ಗಾಂಧಿ ಕುಟುಂಬದ ಮೇಲೆ ನನಗೆ ವಿಶೇಷ ಪ್ರೀತಿಯಿದೆ. ಪಕ್ಷದ ಶಿಸ್ತಿನ ಚೌಕಟ್ಟನ್ನು ನಾನು ಮೀರುವುದಿಲ್ಲ, ಬೇರೆಯವರು ಮೀರಿದರೂ ನನಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button