Top Newsಉಪ ಚುನಾವಣೆರಾಜಕೀಯರಾಜ್ಯಸುದ್ದಿ

ಶಿಗ್ಗಾಂವಿ ಸೋಲಿಗೆ ಒಳೇಟು ಕಾರಣ.. ರಾಜ್ಯ ಬಿಜೆಪಿಗರ ಮೇಲೆ ಹೈಕಮಾಂಡ್ ಬ್ರಹ್ಮಾಸ್ತ್ರ..!?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಎದುರು ನೋಡುತ್ತಿದ್ದ ಬಿಜೆಪಿ ವರಿಷ್ಠರಿಗೆ ಬೈ ಎಲೆಕ್ಷನ್ ಹೀನಾಯ ಸೋಲು ತೀವ್ರ ಮುಜುಗರ ತಂದಿದೆ. ರಾಜ್ಯ ಬಿಜೆಪಿಗರ ವಿರುದ್ಧ ಹೈಕಮಾಂಡ್ ಕೆಂಡಾಮಂಡಲವಾಗಿದ್ದು, ಸೋಲಿಗೆ ಕಾರಣರಾದವರ ತಲೆದಂಡಕ್ಕೆ ಮುಂದಾಗಿದೆ. ಪ್ರಮುಖವಾಗಿ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಪುತ್ರನನ್ನು ಬಿಜೆಪಿಯ ಒಂದು ಗುಂಪು ಸೋಲಿಸಿದೆ ಎಂಬ ದೂರು ಹೈಕಮಾಂಡ್ ಅಂಗಳ ತಲುಪಿದೆ.

ರಾಜ್ಯ ಬಿಜೆಪಿ ಪಾಲಿಗೆ ಬೈ ಎಲೆಕ್ಷನ್ ಭೂತ ಬೆಂಬಿಡದೆ ಕಾಡುತ್ತಿದೆ. ಬಿಜೆಪಿ ಬಣಗಳ ಒಳ ಜಗಳ ತಾರಕಕ್ಕೇರಿ ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಕೇಸರಿ ಪಡೆ ಸೋತು ಮಕಾಡೆ ಬಿದ್ದಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಒಳಬೇಗುದಿ ಮಧ್ಯೆಯೂ ಗೆಲುವು ದಾಖಲಿಸುವಲ್ಲಿ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಪಕ್ಷದ ಕೆಲ ನಾಯಕರು ಬೊಮ್ಮಾಯಿ ಕುಟುಂಬದ ಮೇಲೆ ಮಾಡಿದ ಪಿತೂರಿಯೇ ಕಾರಣ ಎಂಬ ಚರ್ಚೆ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಶುರುವಾಗಿದೆ. ಬಿಜೆಪಿಯ ಕೆಲ ನಾಯಕರೇ ಲಿಂಗಾಯತ ಮತದಾರರಿಗೆ ರಹಸ್ಯ ಸಂದೇಶ ರವಾನಿಸಿದ್ದು, ಭರತ್ ಬೊಮ್ಮಾಯಿ ಸೋಲಿಗೆ ಕಾರಣವಾಗಿದ್ದಾರೆ. ಭರತ್ ಗೆ ಟಿಕೆಟ್ ತಪ್ಪಿಸಲು ಯತ್ನಿಸಿದ್ದ ಕೆಲ ನಾಯಕರು ಷಡ್ಯಂತ್ರ ನಡೆಸಿ ಉಪ ಚುನಾವಣೆಯಲ್ಲಿ ಭರತ್ ಸೋಲಿಸಿದ್ದಾರೆ.

ಬೊಮ್ಮಾಯಿ ಪುತ್ರನನ್ನು ಸೋಲಿಸಿರೋದು ಪಕ್ಷದಲ್ಲಿನ ಶೀತಲ ಸಮರ ಮತ್ತಷ್ಟು ತಾರಕಕ್ಕೇರುವ ಮುನ್ಸೂಚನೆ ನೀಡಿದೆ. ಮಾಜಿ ಸಚಿವ ಸಿ.ಸಿ.ಪಾಟೀಲ, ಬಸನಗೌಡ ಪಾಟೀಲ್ ಯತ್ನಾಳ್, ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿ ಹಲವರು ಬೊಮ್ಮಾಯಿ ಪುತ್ರ ಭರತ್ ಅವರನ್ನು ಗೆಲ್ಲಿಸಲು ಬಹಳ ಪ್ರಯತ್ನ ಪಟ್ಟಿದ್ದರು. ಆದ್ರೆ, ಈ ನಾಯಕರನ್ನು ಟಾರ್ಗೆಟ್ ಮಾಡಲು ಲಿಂಗಾಯತ ಸಮುದಾಯಕ್ಕೆ ರಹಸ್ಯ ಸಂದೇಶ ರವಾನಿಸಲಾಗಿತ್ತು. ಇದರ ಪರಿಣಾಮ ಬಿಜೆಪಿಯ ಲಿಂಗಾಯತ ಮತಗಳು ವಿಭಜನೆಯಾಗಿದೆ. ಅಹಿಂದ ವೋಟುಗಳು ಒಗ್ಗಟ್ಟಾದವು. ಪರಿಣಾಮ ಬೊಮ್ಮಾಯಿ ಪುತ್ರ ಸೋತಿದ್ದಾರೆ.

ಈಗಾಗಲೇ ಈ ಮಾಹಿತಿಯು ಬಿಜೆಪಿ ಹೈಕಮಾಂಡ್ ಗಮನಕ್ಕೆ ಹೋಗಿದ್ದು, ಬೊಮ್ಮಾಯಿ ಪುತ್ರ ಭರತ್ ಸೋಲಿಗೆ ಕಾರಣರಾದವರ ಮೇಲೆ ಬ್ರಹ್ಮಾಸ್ತ್ರ ಬೀಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಇಂಬು ಕೊಡುವಂತೆ ಬಿಜೆಪಿ ಶಾಸಕ ಯತ್ನಾಳ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರವರ ಪುತ್ರ ವ್ಯಾಮೋಹವೇ ಬಿಜೆಪಿಯ ಸೋಲಿಗೆ ಕಾರಣ ಎಂದಿದ್ದಾರೆ. ಅಲ್ಲದೆ ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಮುಗಿಬಿದ್ದಿರುವ ಯತ್ನಾಳ್ ಅವರು ವಿಜಯೇಂದ್ರ ಬದಲಾವಣೆ ನಿಶ್ಚಿತ ಎಂದಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ತ್ರಿಕ್ಷೇತ್ರ ಸೋಲನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ರಹಸ್ಯ ಮಾಹಿತಿ ತರಿಸಿಕೊಳ್ಳಲು ಮುಂದಾಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಪಕ್ಷದ ಹಿತವನ್ನು ಬಲಿ ಕೊಟ್ಟ ರಾಜ್ಯ ನಾಯಕರನ್ನು ದೂರ ಇಡಲು ಚಿಂತನೆ ನಡೆಸಿದ್ದಾರೆ ಎಂದು ಫ್ರೀಡಂ ಟಿವಿಗೆ ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

Comments (0)

Your email address will not be published. Required fields are marked *

Back to top button