
ತುಮಕೂರು: ಶಿರಾ ತಾಲ್ಲೂಕಿನ ಮಾಗೋಡು ಗೊಲ್ಲರಹಟ್ಟಿಯಲ್ಲಿ ನೆಲೆಸಿರುವ ಶ್ರೀ ಕಂಬದ ರಂಗನಾಥಸ್ವಾಮಿಯ ಅದ್ದೂರಿ ಹೂವಿನ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ನೆರವೇರಿದೆ. ಈ ರಥೋತ್ಸವವು ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಹೂವಿನ ರಥೋತ್ಸವ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಸಾವಿರಾರು ಭಕ್ತರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.
ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿಯು ಹೂವಿನ ಪ್ರಿಯನೆಂದೇ ಪ್ರಸಿದ್ಧನಾಗಿದ್ದಾನೆ. ಸ್ವಾಮಿಯು ಕಂಬದಲ್ಲಿ ಮೂಡಿರುವ ಕಾರಣ ಭಕ್ತರು ಆತನನ್ನು ‘ಕಂಬದರಂಗ’ ಎಂದು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಿದರೆ ಭಕ್ತರು ದೇವರಿಗೆ ಹೂವಿನ ತುಲಾಭಾರ ಮಾಡುವುದಾಗಿ ಹರಕೆ ಹೊರುತ್ತಾರೆ. ರಥೋತ್ಸವದ ದಿನ ಸಾವಿರಾರು ರೂಪಾಯಿ ಮೌಲ್ಯದ ವಿವಿಧ ಬಗೆಯ ಹೂವುಗಳನ್ನು ತಂದು ರಥಕ್ಕೆ ಅರ್ಪಿಸುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.
ರಥೋತ್ಸವದ ಸಮಯದಲ್ಲಿ ಬೃಹತ್ ರಥವು ಸಂಪೂರ್ಣವಾಗಿ ಹೂವುಗಳಿಂದ ಆವೃತವಾಗಿ ಕಂಗೊಳಿಸುತ್ತಿತ್ತು. ಭಕ್ತರು ರಥದ ಮೇಲೆ ಹೂವುಗಳನ್ನು ಎರಚುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಹೂವುಗಳ ಸುವಾಸನೆ ಮತ್ತು ರಥದ ಸೌಂದರ್ಯವು ನೆರೆದಿದ್ದ ಭಕ್ತಾದಿಗಳ ಕಣ್ಮನ ಸೆಳೆಯಿತು. ಈ ರಥೋತ್ಸವವು ಪ್ರತಿವರ್ಷವೂ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುವ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಕರ್ಷಣೆಯಾಗಿದೆ.




