ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಇಂದು ಎಲ್ಲ ಆರೋಪಿಗಳ ದೋಷಾರೋಪಣೆ ನಿಗದಿ ಪ್ರಕ್ರಿಯೆ ನಡೆದಿದೆ.
ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಎಲ್ಲ ಆರೋಪಿಗಳು ಹಾಜರಾಗಿದ್ದರು. ಆದರೆ, ದೋಷಾರೋಪಣೆ ಓದಿ ಮುಗಿಸಿದ ನಂತರ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಕೂಡ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಗಾಗಿ ಮುಂದಿನ ಹಂತದ ಸಾಕ್ಷಿಗಳ ವಿಚಾರಣೆಗೆ ನ್ಯಾಯಾಲಯ ದಿನಾಂಕ ನಿಗದಿ ಮಾಡಿದೆ. ನವೆಂಬರ್ 10ರಂದು ವಿಚಾರಣೆಗೆ ದಿನಾಂಕ ನಿಗದಿ ಆಗಿದೆ.
ಇದು ಹೈಪ್ರೊಫೈಲ್ ಕೇಸ್ ಆದ್ದರಿಂದ ಕೋರ್ಟ್ ಹಾಲ್ನಲ್ಲಿ ಅನೇಕ ವಕೀಲರು ಕಿಕ್ಕಿರಿದಿದ್ದರು. ಕೇಸ್ಗೆ ಸಂಬಂಧ ಇರದ ಎಲ್ಲರೂ ಹೊರಗೆ ಹೋಗುವಂತೆ ಸೂಚಿಸಲಾಯಿತು. ಆದರೂ ಕೂಡ ಗದ್ದಲ ನಿಲ್ಲಲಿಲ್ಲ. ಬಳಿಕ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ಜಡ್ಜ್ ನಿರ್ಧರಿಸಿದರು. ಜನರನ್ನು ಕದಲಿಸಿದ ನಂತರ ದೋಷಾರೋಷಣೆ ನಿಗದಿ ಪ್ರಕ್ರಿಯೆ ಆರಂಭ ಮಾಡಲಾಯಿತು.
ಜಡ್ಜ್ ಪ್ರಮುಖ ಆರೋಪಿ ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳ ಎದುರು ದೋಷಾರೋಪಗಳನ್ನು ಓದಿ ಹೇಳಲಾಯಿತು. ಆರೋಪ ಒಪ್ಪಿಕೊಂಡರೆ ಶಿಕ್ಷೆ ಪ್ರಕಟ ಆಗುತ್ತಿತ್ತು. ಆರೋಪಗಳನ್ನು ಒಪ್ಪಿಕೊಳ್ಳದ ಕಾರಣ ಸಾಕ್ಷ್ಯಗಳ ವಿಚಾರಣೆಗೆ ದಿನಾಂಕ ನಿಗದಿ ಆಗಿದೆ.


