
ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಕ್ರೇಜ್ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಇಡೀ ದೇಶವೇ ಕೌಂಟಿಂಗ್ ಸೆಂಟರ್‌ಗಳತ್ತ ಗಮನ ಹರಿಸಿದ್ದರೆ, ಇಲ್ಲೊಬ್ಬ ಎಲೆಕ್ಷನ್ ಇನ್-ಚಾರ್ಜ್ ಅಧಿಕಾರಿ ಮಾತ್ರ ತಮ್ಮ ಕೆಲಸವನ್ನೇ ಮರೆತು ವಿಜಯ್ ಅವರ ‘ಜನನಾಯಕನ್’ ಸಿನಿಮಾ ವೀಕ್ಷಣೆಯಲ್ಲಿ ಮಗ್ನರಾಗಿದ್ದರು. ಅವರ ಈ ಸಿನಿಮಾ ಪ್ರೇಮ ಈಗ ಜೈಲು ಪಾಲಾಗುವಂತಹ ಪರಿಸ್ಥಿತಿ ತಂದಿಟ್ಟಿದೆ.

ಕೌಂಟಿಂಗ್ ಸೆಂಟರ್‌ನಲ್ಲಿ ಸಿಸಿಟಿವಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಯುವರಾಜ್ ಎಂಬುವವರು ಈ ಮಹಾನ್ ಸಾಹಸ ಮಾಡಿದವರು. ಸಿಸಿಟಿವಿ ಫೂಟೇಜ್ ಮೂಲಕ ಮತ ಎಣಿಕೆ ಕೇಂದ್ರದ ಭದ್ರತೆ ಮತ್ತು ಚಟುವಟಿಕೆಗಳನ್ನು ಗಮನಿಸುವುದು ಇವರ ಜವಾಬ್ದಾರಿಯಾಗಿತ್ತು. ಆದರೆ, ಆ ಗಂಭೀರ ಕೆಲಸವನ್ನು ಬದಿಗಿಟ್ಟ ಇವರು, ತಮ್ಮ ಲ್ಯಾಪ್‌ಟಾಪ್‌ನಲ್ಲಿ ವಿಜಯ್ ಅಭಿನಯದ ಸಿನಿಮಾವನ್ನು ಆರಾಮವಾಗಿ ಕುಳಿತು ನೋಡುತ್ತಿದ್ದರು.
ಈ ಅಧಿಕಾರಿ ಸಿನಿಮಾ ನೋಡುತ್ತಿರುವ ದೃಶ್ಯಗಳ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಚುನಾವಣೆಯಂತಹ ಸೂಕ್ಷ್ಮ ಸಮಯದಲ್ಲಿ ಕರ್ತವ್ಯದ ಮೇಲೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಯುವರಾಜ್ ಅವರನ್ನು ಬಂಧಿಸಲಾಗಿದೆ. ಸದ್ಯ ಈ ‘ಜನನಾಯಕನ್’ ಅಭಿಮಾನಿಯ ಸಿನಿಮಾ ಕ್ರೇಜ್ ಇಡೀ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.




