
ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ವಿಶ್ವಕರ್ಮ ಸಮುದಾಯದ ಸಾಧಕರನ್ನು ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ವಿರಾಟ್ ಗ್ಲೋಬಲ್ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ವಿಶ್ವಕರ್ಮ ಎಜುಕೇಷನ್ ಮತ್ತು ವೆಲ್ಫೇರ್ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ದೇವರಾಜ್ ಅರಸು ಸಭಾಂಗಣದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಈ ವೇಳೆ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಮೆ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ರನ್ನು ಸನ್ಮಾನಿಸಲಾಯಿತು.

ಅಲ್ಲದೆ ರಾಮಮಂದಿರ ನಿರ್ಮಾಣಕ್ಕಾಗಿ ದುಡಿದ ಸ್ಥಪತಿಗಳಾದ ಶಿಲ್ಪಿ ಮಾನಯ್ಯ ಬಡಿಗೇರ್, ರಾಮಮಂದಿರಕ್ಕಾಗಿ ರಥ ನಿರ್ಮಾಣ ಮಾಡುತ್ತಿರುವ ರಥ ಶಿಲ್ಪಿ ರಾಜಗೋಪಾಲ ಆಚಾರ್ಯ, ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್, ಬಿಗ್ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್, ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತರಾದ ಕುಮಾರಿ ದಿವ್ಯಾ, ಮಿಥುನ್ ಮಂಜುನಾಥ್ ಪದ್ಮಶ್ರೀ ಪುರಸ್ಕೃತ, ಮನೋ ವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್, ಅಂಗವಿಕಲ ಅಧಿನಿಯಮದ ನಿವೃತ್ತ ಆಯುಕ್ತರಾದ ಕೆ.ಎಸ್.ರಾಜಣ್ಣರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ ಫೌಂಡೇಶನ್ ನಿಂದ ನ್ಯಾಯಾಧೀಶರ ಪರೀಕ್ಷೆಗೆ ತರಬೇತಿ ಪಡೆದು ಉತ್ತೀರ್ಣರಾಗಿರುವ ಅಭ್ಯರ್ಥಿಗಳನ್ನೂ ಸಹ ಸನ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಶೂಟರ್ ದಿವ್ಯಾ ಗೈರು ಹಾಜರಿಯಲ್ಲಿ ಅವರ ಪೋಷಕರು ಪ್ರಶಸ್ತಿ ಸ್ವೀಕರಿಸಿದರು. ಬಳಿಕ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಮೆಡಿಕಲ್ ವಿದ್ಯಾರ್ಥಿಗಳಿಗೆ ತಲಾ ೨೦ ಸಾವಿರ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ೧೫ ಸಾವಿರ ಹಾಗೂ ಪದವಿ ಮತ್ತು ತತ್ಸಮಾನ ಶಿಕ್ಷಣ ಪಡೆಯುತ್ತಿರುವವರಿಗೆ ೧೦ ಸಾವಿರ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಫೌಂಡೇಶನ್ನ ಅಧ್ಯಕ್ಷರಾದ ಎಸ್. ಮಾಳಿಗಾಚಾರ್ ಮಾತನಾಡಿ, ಸಮುದಾಯಕ್ಕೆ ರಾಜಕೀಯ ಶಕ್ತಿ ಇಲ್ಲದಿರುವುದರಿಂದ ಯುವಕರು ವಿದ್ಯೆಯಿಂದಲೇ ಎಲ್ಲವನ್ನೂ ಸಾಧಿಸಬೇಕು ಎಂದು ಕರೆ ನೀಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಾಹಿತಿಗಳೂ ಆಗಿರುವ ಚಂದ್ರಶೇಖರ್ ಕಂಬಾರ್ ಸಹ ಪಾಲ್ಗೊಂಡು ಸಮುದಾಯಕ್ಕೆ ಸ್ಪೂರ್ತಿ ತುಂಬಿದರು.

ಇದೇ ವೇಳೆ, ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತರಾದ ಪಿ.ಎನ್. ಶ್ರೀನಿವಾಸಾಚಾರಿ, ನಿವೃತ್ತ ಕಾರ್ಯದರ್ಶಿ ಕೆ.ಎಸ್. ಪ್ರಭಾಕರ್, ವಿಶೇಷ ಆಹ್ವಾನಿತರಾಗಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಾದ ಎಸ್. ಇ. ರಾಜೀವ್ , ಎಸ್, ದೇಸಿಕಾ ಚಾರ್, ಪದಾಧಿಕಾರಿಗಳಾದ ಸುರೇಶ್, ಜನಾರ್ದನ ಮೂರ್ತಿ ಸೇರಿದಂತೆ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಹಲವು ಮುಖಂಡರು ಪಾಲ್ಗೊಂಡಿದ್ದರು. ನೂರಾರು ಜನ ಸಮುದಾಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರ ಭಾಷಣದಿಂದ ಸ್ಫೂರ್ತಿಗೊಂಡರು.




