ರಾಜ್ಯಸುದ್ದಿ

ರಾಮನಗರ ವಕೀಲರ ಹೋರಾಟಕ್ಕೆ ಮಣಿದ ಸರ್ಕಾರ; ಐಜೂರು ಠಾಣೆಯ ಪಿಎಸ್ಐ ಅಮಾನತು

ರಾಮನಗರ: ವಕೀಲರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದ್ದು ಐಜೂರು ಠಾಣೆ ಪಿಎಸ್ಐ ಸೈಯದ್ ತನ್ವೀರ್ ಹುಸೇನ್ ಅವರನ್ನ ಅಮಾನತು ಮಾಡಲಾಗಿದೆ. ರಾಮನಗರ ಜಿಲ್ಲಾಡಳಿತ ಕಚೇರಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ ಬಳಿಕ ಗುರುವಾರ ವಿಧಾನಸೌಧ ಚಲೋಗೆ ವಕೀಲರು ಕರೆ ನೀಡಿದ್ದರು. ವಕೀಲರ ಪ್ರತಿಭಟನೆಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಮುಜುಗರ ತಪ್ಪಿಸಿಕೊಳ್ಳಲು ಪಿಎಸ್ಐ ಸೈಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿದೆ.

ರಾಮನಗರದ 40 ವಕೀಲರ ವಿರುದ್ಧ ಐಜೂರು ಪೊಲೀಸ್ ಠಾಣೆ ಪಿಎಸ್​ಐ ಆಗಿದ್ದ ತನ್ವೀರ್ ಹುಸೇನ್​ ಅವರು ಎಫ್​ಐಆರ್​ ದಾಖಲಿಸಿದ್ದರು. ಎಫ್​ಐಆರ್ ರದ್ದು ಮಾಡುವಂತೆ ಆಗ್ರಹಿಸಿ ವಕೀಲರು ಸೋಮವಾರ ಪ್ರತಿಭಟನೆ ಆರಂಭಿಸಿದರು. ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತ್ತು. ಧರಣಿನಿರತ ವಕೀಲರಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ, ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಅವರು ಕೂಡ ಸಾಥ್ ನೀಡಿದ್ದರು. ತಡ ರಾತ್ರಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ದರಣಿ ನಡೆಸುತ್ತಿದ್ದ ವಕೀಲರಿಗೆ ಕೈ ಜೋಡಿಸಿದ್ದರು. ಇದಾದ ಬಳಿಕ ಈ ವಿಚಾರ ದೊಡ್ಡ ಮಟ್ಟಿಗೆ ಚರ್ಚೆ ಆಗಲು ಆರಂಭವಾಯಿತು. ಈ ವಿಚಾರ ಸಂಬಂಧ ಜೆಡಿಎಸ್, ಬಿಜೆಪಿ ಸದಸ್ಯರು ಸರ್ಕಾರದ ಉತ್ತರಕ್ಕಾಗಿ ಒತ್ತಾಯಿಸಿದ್ದು ಇಂದು ವಿಧಾನಸಭೆಯಲ್ಲಿ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಲಿದ್ದಾರೆ.

ಮತ್ತೊಂದೆಡೆ ಫೆ.19ರಂದು ಶುರುವಾದ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ತಡರಾತ್ರಿ ಕೂಡ ಧರಣಿ ನಡೆದಿದೆ. ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ವಕೀಲರು ತಡರಾತ್ರಿ ವರೆಗೂ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಈಗ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ ಅಮಾನತು ಮಾಡಲಾಗಿದೆ.

ವಕೀಲರ ಆಕ್ರೋಶಕ್ಕೆ ಕಾರಣವೇನು?

ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದನ್ನು ಪ್ರಶ್ನಿಸಿ ಚಾನ್ ಪಾಷಾ ಎಂಬಾತ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ. ವಕೀಲ ಮತ್ತು ಎಸ್‌ಡಿಪಿಐ ಕಾರ್ಯಕರ್ತನೂ ಆಗಿರೋ ಚಾನ್ ಪಾಷಾ, ಫೇಸ್​ಬುಕ್​ನಲ್ಲಿ ನ್ಯಾಯಾಧೀಶರ ಆದೇಶವನ್ನೇ ಪ್ರಶ್ನಿಸಿ ಅವಾಚ್ಯ ಪದ ಬಳಸಿ ಪೋಸ್ಟ್ ಹಾಕಿದ್ದ. ಚಾನ್‌ ಪಾಷಾ ವಿರುದ್ಧ ದೂರು ದಾಖಲಾಗ್ತಿದ್ದಂತೆ ಫೇಸ್​ಬುಕ್ ಪೋಸ್ಟ್ ಡಿಲೀಟ್ ಮಾಡಿದ್ದ. ಪೊಲೀಸರು ಚಾನ್ ಪಾಷಾನನ್ನು ಬಂಧಿಸಿದ್ರು.ವಕೀಲ ಚಾನ್ ಪಾಷಾ ಮಾಡಿರೋ ಅವಹೇಳನಕಾರಿ ಪೋಸ್ಟ್ ವಿಚಾರ ಇಷ್ಟಕ್ಕೆ ಮುಗಿದಿಲ್ಲ. ಚಾನ್ ಪಾಷಾ ವಿರುದ್ಧ ವಕೀಲರ ಗುಂಪೊಂದು ರಾಮನಗರ ಜಿಲ್ಲಾ ವಕೀಲರ ಸಂಘಕ್ಕೆ ದೂರು ಕೊಟ್ಟಿತ್ತು. ನನ್ನ ವಿರುದ್ಧ ಕೊಟ್ಟಿರೋ ಸುಳ್ಳು ದೂರು ಅಂತಾ ಮನವರಿಕೆ ಮಾಡಲು ಚಾನ್ ಪಾಷಾ ತನ್ನ ಆಪ್ತರ ಜೊತೆಗೆ ವಕೀಲರ ಸಂಘದ ಕಚೇರಿಗೆ ತೆರಳಿದ್ದ ವೇಳೆ ಜಟಾಪಟಿ ನಡೆದಿದೆ. ಈ ವೇಳೆ ತನ್ನ ಹಾಗೂ ತನ್ನ ಜೊತೆ ಬಂದಿದ್ದವರ ಮೇಲೆ ಹಲ್ಲೆ ಮಾಡಿ, 40 ವಕೀಲರ ವಿರುದ್ಧ ರಾಮನಗರ ಠಾಣೆಗೆ ದೂರು ನೀಡಿದ್ರು. ಇದರಂತೆ ಬರೋಬ್ಬರಿ 40 ವಕೀಲರ ವಿರುದ್ಧ ರಾಮನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ವಕೀಲರ ಮೇಲೆ ಎಫ್​ಐಆರ್ ದಾಖಲಿಸಿರೋ ಪಿಎಸ್​ಐ ತನ್ವೀರ್ ಹುಸೇನ್ ಅಮಾನತು ಮಾಡುವಂತೆ ಪಟ್ಟು ಹಿಡಿದ ವಕೀಲರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸ್ತಿದ್ದರು.

Comments (0)

Your email address will not be published. Required fields are marked *

Back to top button