ಜಿಲ್ಲೆಜ್ಯೋತಿಷ್ಯ

ಜ್ಯೋತಿಷಿಗಳ ಅಡ್ಡೆಯಂತಾದ ಅಂಕೋಲಾ ಪಟ್ಟಣ

ಕಾರವಾರ : ಪ್ರೀತಿ-ಪ್ರೇಮದ ಹುಚ್ಚು ಲೋಕದಲ್ಲಿರುವ ಪ್ರೇಮಿಗಳಿಗೆ,ನಿಮ್ಮ ಪ್ರೇಮ ಅಮರವಾಗಲು,ನಿಮ್ಮ ತಂದೆ ತಾಯಿಗಳಿಂದ ಯಾವುದೇ ತಕರಾರು ಬರದಿರುವಂತೆ ಜ್ಯೋತಿಷ್ಯದ ಮೂಲಕ ಪರಿಹಾರ ನೀಡುತ್ತೇವೆ ಎಂದು ಬೊಗಳೆ ಬಿಟ್ಟು ಪ್ರೇಮದ ಅಮಲಿನಲ್ಲಿರುವ ಪ್ರೇಮ ಪಕ್ಷಿಗಳಿಂದ ಹಣ ಕೀಳುತ್ತಿರುವ ಜ್ಯೋತಿಷಿಗಳು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.


ನಗರದ ಕಾಲೇಜು ಹಾಗೂ ಸಿನಿಮಾ ಥೇಟರ್ ಎದುರು ನಿಂತು ತಮ್ಮ ಪ್ರೇಮದ ವೇದನೆಯಲ್ಲಿರುವ ಪ್ರೇಮಿಗಳಿಗೆ ಜ್ಯೋತಿಷಿಗಳು ಪ್ರೇಮದ ಜೋತಿಷ್ಯ ಹೇಳಲು ನಿಂತುಕೊಂಡಿರುತ್ತಾರೆ. ತಮ್ಮದೇ ಆದ ಲೋಕದಲ್ಲಿರುವ ಪ್ರೇಮಿಗಳ ಬಳಿ ಬಂದು ನಿಮ್ಮ ಪ್ರೀತಿಯ ಸುಗಮ ದಾರಿಗೆ ನಾನು ಪರಿಹಾರ ಮಾಡಿಕೊಡುತ್ತೇನೆ. ಏನು ಹೆದರುವುದು ಬೇಡ ಎಂದು ಹೇಳುತ್ತಾ, ಅವರನ್ನು ನಂಬಿಸಿ ಹಣ ಕೀಳುವುದನ್ನೆ ಇವರು ದಂದೆಯನ್ನಾಗಿ ಮಾಡಿಕೊಂಡಿದ್ದಾರೆ. ಚಪಲ ತೀರಿಸಿಕೊಂಡ ಚೆನ್ನಿಗರಾಯನಿಗೆ ಪ್ರಿಯತಮೆಯಿಂದ ಮುಕ್ತಿ ಹೊಂದಲು ಈ ಜ್ಯೋತಿಷಿಗಳು ಪರಿಹಾರ ನೀಡುತ್ತೇವೆ ಎಂದು ಅವರಿಂದಲೂ ಹಣ ಕೀಳುವ ಇಂತಹ ಜ್ಯೋತಿಷಿಗಳ ಮೋಸಕ್ಕೆ ಅಂಕೋಲಾದ ಎಷ್ಟೋ ಪ್ರೇಮಿಗಳು ಬಲಿಯಾಗಿದ್ದಾರೆ.

ಉತ್ತರ ಕರ್ನಾಟಕದ ಬಾಗಲಕೋಟೆ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಇಲ್ಲಿಗೆ ವಲಸೆ ಬಂದಿರುವ ಏಳೆಂಟು ಜನರ ತಂಡವೊಂದು ಇಲ್ಲಿನ ಕೆಲ ವಸತಿ ಗೃಹದಲ್ಲಿ ಬಾಡಿಗೆ ಕೊಠಡಿ ಪಡೆದು ವಾಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಸೂರ್ಯೋದಯವಾದೊಡನೆ ಶುಭ್ರವಾದ ಬಿಳಿ ಅಂಗಿ ಹಾಗೂ ಲುಂಗಿ ಧರಿಸಿ ಹೆಗಲಿಗೊಂದು ಕಪ್ಪು ಬಣ್ಣದ ಬ್ಯಾಗನ್ನು ಏರಿಸಿ ವಸತಿ ಗೃಹದಿಂದ ಹೊರಬೀಳುವ ಈ ತಂಡದ ಸದಸ್ಯರು ಅಮಾಯಕರಿಂದ ಹಣ ಕೀಳಲು ಹೊಂಚು ಹಾಕಿ ಪಟ್ಟಣದ ಬೇರೆ ಬೇರೆ ಕಡೆ ತೆರಳುತ್ತಾರೆ.


ಕುಟುಂಬದ ಯಜಮಾನರು ಕೆಲಸದ ನಿಮಿತ್ತ ಹೊರಗಡೆ ಹೋದಾಗ ಮಹಿಳೆಯರು, ಮಕ್ಕಳು ಮನೆಯಲ್ಲಿದ್ದನ್ನು ಸೂಕ್ಷ್ಮವಾಗಿ ಗಮನಿಸುವ ಈ ಸ್ವಯಂಘೋಷಿತ ಜ್ಯೋತಿಷಿಗಳು ಅಂತಹ ಮನೆಗಳಿಗೆ ನುಗ್ಗಿ, ನಿಮಗೆ ಇನ್ನೂ ಕೆಲ ದಿನಗಳಲ್ಲಿ ಲಕ್ಷ್ಮೀ ದೇವಿಯ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಧನ ಸಂಪತ್ತು ತುಂಬಿ ತುಳುಕಲಿದೆ ಎಂದು ಹಳಿ ಇಲ್ಲದ ರೈಲು ಬಿಟ್ಟು 100 ರೂ. ಕೊಟ್ಟರೆ ಎಲ್ಲವನ್ನು ಸವಿಸ್ತಾರವಾಗಿ ವಿವರಿಸುವುದಾಗಿ ನಂಬಿಸಿ ಮರಳು ಮಾಡುತ್ತಾರೆ. ಹಣ ಸಿಕ್ಕಿದ ಕೂಡಲೇ ಒಂದು ಬಿಳಿ ಹಾಳೆಯ ಮೇಲೆ ಕೆಲವಷ್ಟು ಸಂಖ್ಯೆಗಳನ್ನು ಬರೆಯಲು ತಿಳಿಸುತ್ತಾರೆ. ಸಂಖ್ಯೆ ಬರೆದ ತಕ್ಷಣ ಲೆಕ್ಕಾಚಾರ ಮಾಡುವ ನಾಟಕ ಮಾಡಿ ನಿಮ್ಮ ಮನೆಯಲ್ಲಿ ಧನ ಸಂಪತ್ತು ತುಂಬಿ ತುಳುಕಬೇಕಾದರೆ ಮನೆಯಲ್ಲಿರುವ ಗ್ರಹ ದೋಷವನ್ನು ಪರಿಹಾರ ಮಾಡಲು 2000 ರೂ. ಮೌಲ್ಯದ ಕೆಲವೊಂದು ಅಮೂಲ್ಯವಾದ ವಸ್ತುಗಳನ್ನು ತಾವು ರಿಯಾಯತಿ ದರದಲ್ಲಿ ಅಂದರೆ 1000 ರೂಗಳಿಗೆ ನೀಡುತ್ತೇವೆ. ಈ ವಸ್ತುಗಳು ನಮ್ಮಲ್ಲಿ ಬಿಟ್ಟರೆ ಮತ್ತೆಲ್ಲೂ ಸಿಗಲಾರದು.ಈ ವಸ್ತುಗಳನ್ನು 111 ದಿನಗಳ ಕಾಲ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ನಡೆಸಿ ನಂತರ ನದಿಗೆ ಹಾಕಿದರೆ ಎಲ್ಲ ವಿಘ್ನಗಳು ದೂರವಾಗುತ್ತವೆ ಎಂದು ಮರಳು ಮಾಡಿ ಹಣ ಲಪಟಾಯಿಸಿಕೊಂಡು ಹೋಗುತ್ತಾರೆ.

ಈ ಸ್ವಯಂಘೋಷಿತ ಜ್ಯೋತಿಷಿಗಳು ಶಾಲಾ ಕಾಲೇಜಿಗೆ ಹೋಗುವ ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳು ಹಾಗೂ ಕೆಲ ಮಾರಾಟ ಕಂಪನಿಯ ಪ್ರತಿನಿಧಿಗಳನ್ನ ತಮ್ಮ ಮಾತಿನ ಮೋಡಿಯ ಮೂಲಕ ಮರಳು ಗೊಳಿಸಿ ಅವರಿಂದ ಹಣ ಪೀಕುತ್ತಾರೆ.
ಅಮಾಯಕರನ್ನು ಮರಳುಗೊಳಿಸಿ ಹಣ ದೋಚುವ ಇಂತಹ ಸ್ವಯಂ ಘೋಷಿತ ಜ್ಯೋತಿಷಿಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕೆಂದು ಅಂಕೋಲಾದ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ

Comments (0)

Your email address will not be published. Required fields are marked *

Back to top button