ರಾಜ್ಯಸುದ್ದಿ

ಬೇನಾಮಿ ಹೆಸ್ರಲ್ಲಿ ಆಸ್ತಿ: ಬ್ಲ್ಯಾಕ್ ಮನಿ ವೀರರು, ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾ ದಾಳಿ..!

ಬೆಳಗಿನ ಜಾವ..ನಿದ್ದೆ ಮಂಪರಿನಲ್ಲಿದ್ರು ಆ ಸರ್ಕಾರಿ ಅಧಿಕಾರಿಗಳು…ಮನೆಯ ಕಾಲಿಂಗ್ ಬೆಲ್ ರಿಂಗಾಗುತ್ತಲೇ ಬಾಗಿಲು ತೆಗೆದವರಿಗೆ ಶಾಕ್ ಕಾದಿತ್ತು. ಕಣ್ಣೆದುರಿಗೆ ನಿಂತಿದ್ರು ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ 40ಕ್ಕೂ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.. ವಿವಿಧ ಇಲಾಕೆಗಳ ಬ್ಲ್ಯಾಕ್ ಮನಿ ವೀರರ ಬಣ್ಣ ಬಯಲಾಗಿದೆ. ಜಮೀನು, ಸೈಟು, ಮನೆ ಹೀಗೆ ವಿವಿಧೆಡೆ ಕಪ್ಪು ಹಣವನ್ನ ಬಳಸಿ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದವರ ಮಗ್ಗಲು ಮುರಿದಿದೆ ಲೋಕಾಯುಕ್ತ. ದಾಖಲೆಗಳ ಪರಿಶೀಲನೆ ಬಳಿಕವಷ್ಟೆ ಯಾರ್ಯಾರು ಎಷ್ಟೆಷ್ಟು ಎಲ್ಲೆಲ್ಲಿ ಹೇಗೆ ಕಬಳಿಸಿದ್ರು ಅನ್ನೋ ಸತ್ಯ ಬಯಲಾಗುತ್ತದೆ.

ಅಂದಾಗೆ ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ ವಿವಿಧ ಇಲಾಖೆಗಳ ಹತ್ತು ಅಧಿಕಾರಿಗಳಿಗೆ ಸೇರಿದ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ಹತ್ತು ಜಿಲ್ಲೆಗಳ 40 ಸ್ಥಳಗಳ ಮೇಲೆ ದಾಳಿ ನಡೆಸಿದ್ದು ಆಸ್ತಿಪಾಸ್ತಿಗಳ ಲೆಕ್ಕಾಚಾರ ಹಾಕುತ್ತಿದ್ದಾರೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಎಂಜಿನಿಯರ್‌ ಹನುಮಂತರಾಯಪ್ಪ, ಲೋಕೋಪಯೋಗಿ ಇಲಾಖೆಯ ಮಂಡ್ಯ ವಿಭಾಗದ ಎಂಜಿನಿಯರ್‌ ಹರ್ಷ, ಚಿಕ್ಕಮಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿ ನೇತ್ರಾವತಿ, ಹಾಸನದ ಆಹಾರ ನಿರೀಕ್ಷಕ ಜಗನ್ನಾಥ್‌ ಜಿ., ಕೊಪ್ಪಳ ಅರಣ್ಯ ಇಲಾಖೆ ಅಧಿಕಾರಿ ರೇಣುಕಮ್ಮ, ಚಾಮರಾಜನಗರದ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಪಿ. ರವಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಯಜ್ಞೇಂದ್ರ, ಬಳ್ಳಾರಿಯ ಸಹಾಯಕ ಪ್ರಾಧ್ಯಾಪಕ ಬಿ. ರವಿ, ವಿಜಯನಗರ ಜಿಲ್ಲೆಯ ಇಂಧನ ಇಲಾಖೆ ಅಧಿಕಾರಿ ಭಾಸ್ಕರ್‌ ಮತ್ತು ಮಂಗಳೂರಿನ ಮೆಸ್ಕಾಂ ಅಧಿಕಾರಿ ಶಾಂತಕುಮಾರ್‌. ಈ ಎಲ್ಲ ಅಧಿಕಾರಿಗಳಿಗೆ ಸಂಬಂಧಿಸಿದ 40 ಸ್ಥಳಗಳ ಮೇಲೆ ನಸುಕಿನಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಧಿಕಾರಿಗಳು ಹಾಗೂ ಅವರ ನಿಕಟ ಸಂಬಂಧಿಗಳು ಹಾಗೂ ಶಂಕಿತ ಬೇನಾಮಿದಾರರ ಮನೆ, ಕಚೇರಿ ಹಾಗೂ ವ್ಯವಹಾರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಲೋಕಾಯುಕ್ತ ಪೊಲೀಸರನ್ನು ಒಳಗೊಂಡ 40 ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ಎಲ್ಲೆಲ್ಲಿ ಏನೇನು ಸಿಕ್ಕಿದೆ..?
ಮಂಡ್ಯದ ಲೋಕೋಪಯೋಗಿ ಇಲಾಖೆಯ ಇಇ ಹರ್ಷ ಅವರ ಕಚೇರಿ ಹಾಗೂ ಮನೆ ಮತ್ತು ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸ, ಸಂಬಂಧಿಗಳ ಮನೆಗಳು, ಕಲ್ಲಹಳ್ಳಿಯಲ್ಲಿರುವ ಮಾವನ ಮನೆ ಹಾಗೂ ನಾಗಮಂಗಲದ ತೋಟದ ಮನೆಗಳಲ್ಲಿ ಅಕ್ರಮ ಆಸ್ತಿಯ ಲೆಕ್ಕ ಹಾಕಲಾಗುತ್ತಿದೆ. ಮೈಸೂರು ಮುಡಾ ಎಂಜಿನಿಯರ್ ಯಜ್ಞೇಂದ್ರ ಅವರ ಜೆ.ಪಿ.ನಗರದ ಮನೆ, ವಿಜಯನಗರದ ಅಪಾರ್ಟ್ ಮೆಂಟ್, ಕೆ.ಆರ್.ನಗರ ತಾಲೂಕಿನ ನಗರ್ಲೆ ಗ್ರಾಮದ ಅವರ ಸಹೋದರನ ಮನೆಗಳಲ್ಲಿ ತಪಾಸಣೆ ನಡೆಯುತ್ತಿದೆ.

ತುಮಕೂರಿನ ಶಿರಾ ಗೇಟ್ ಬಳಿ ಇರುವ ಕೆಆರ್ ಡಿಎಲ್ ಎಂಜಿನಿಯರ್ ಹನುಮಂತರಾಯಪ್ಪ ಅವರ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಆಸ್ತಿ ಮತ್ತು ಚಿನ್ನಾಭರಣಗಳ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿಯ ವಿಎಸ್ ಕೆ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ರವಿ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದಿದ್ದು ನೆಹರು ಕಾಲೊನಿಯ ಅಪಾರ್ಟ್ ಮೆಂಟ್ ನಲ್ಲಿರುವ ಮನೆಯಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.

ಹಾಸನದ ಆಹಾರ ನಿರೀಕ್ಷಕ ಜಗನ್ನಾಥ್ ಅವರ ಕಚೇರಿ ಹಾಗೂ ನಿವಾಸದಲ್ಲಿ ಶೋಧ ನಡೆಯುತ್ತಿದೆ. ಜಗನ್ನಾಥ್ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ಅವರ ನಿವಾಸ ಮತ್ತು ಕಚೇರಿ ಮೇಲೂ ದಾಳಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ನೇತ್ರಾವತಿ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಒಟ್ನಲ್ಲಿ ವಾಮಮಾರ್ಗವಾಗಿ ಹಣ ಮಾಡೋದು, ಆ ಬ್ಲ್ಯಾಕ್ ಮನಿಯನ್ನ ಜಮೀನಿನ ಮೇಲೆ ಇನ್ವೆಸ್ಟ್ ಮಾಡಿ ಅದಕ್ಕೊಬ್ಬ ಬೇನಾಮಿ ನೇಮಕ ಮಾಡಿ ವೈಟ್ ಮಾಡಿಕೊಳ್ಳೋದನ್ನ ಕರಗತ ಮಾಡಿಕೊಂಡಿರುವ ಸರ್ಕಾರಿ ಅಧಿಕಾರಿಗಳ ಮೇಲೆ ಇದೀಗ ಲೋಕಾಯುಕ್ತ ಹದ್ದಿನ ಕಣ್ಣಿಟ್ಟಿದೆ. ಆಸ್ತಿ ಹೇಗೆ ಬಂತಪ್ಪ ಅಂತ ಕೇಳಿದ್ರೆ, ಉತ್ತರಿಸೋಕೆ ಸಿದ್ದವಿಲ್ಲವಂತೆ ಟ್ರಾಪ್ ಆಗಿರೋ ಅಧಿಕಾರಿಗಳು..ಹೆಚ್ಚಿನ ತನಿಖೆ ನಡೆಯುತ್ತಿದೆ.. ಭ್ರಷ್ಟರ ಬಣ್ಣ ಬಯಲಾಗಬೇಕು ಅಂದ್ರೆ ಪೂರ್ಣ ಪ್ರಮಾಣದ ತನಿಖೆ ಮುಗಿಯಬೇಕು

Comments (0)

Your email address will not be published. Required fields are marked *

Back to top button