
ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಈಗ ‘ಪವರ್’ ಫೈಟ್ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ತನ್ನ ಕುರ್ಚಿ ಉಳಿಸಿಕೊಳ್ಳಲು ರಹಸ್ಯ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಆಡಿದ ಮಾತುಗಳು ಸಿದ್ದರಾಮಯ್ಯ ಟೀಂಗೆ ಹೊಸ ಚೈತನ್ಯ ನೀಡಿದ್ದು, ಈ ಬೆನ್ನಲ್ಲೇ ತೆರೆಮರೆಯಲ್ಲಿ ದೊಡ್ಡ ಮಟ್ಟದ ಪ್ಲ್ಯಾನ್‌ಗಳು ಸಿದ್ಧವಾಗುತ್ತಿವೆ. ಈ ಅಧಿಕಾರ ರಕ್ಷಣೆಯ ಹೋರಾಟಕ್ಕೆ ಈಗ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಎಂಟ್ರಿಯಾಗಿದ್ದು, ಅವರು ಸಿದ್ದರಾಮಯ್ಯ ಅವರಿಗೆ ಭದ್ರವಾದ ಸಾಥ್ ನೀಡಲು ಅಖಾಡಕ್ಕಿಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಫ್ರೀಡಂ ಟಿವಿಗೆ ಸಿಕ್ಕಿರುವ ಇನ್‌ಸೈಡ್ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ನಡುವೆ ನಡೆದ ಭೇಟಿ ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಅತ್ಯಂತ ಆಪ್ತರಾಗಿರುವ ಹರಿಪ್ರಸಾದ್, ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಗುಪ್ತ ಮಾಹಿತಿಗಳನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ನಾಯಕರ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಹರಿಪ್ರಸಾದ್ ಅವರ ಸಲಹೆಗಳು, ಸಿದ್ದು ಬಣವನ್ನು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿವೆ.
ಈ ಭೇಟಿಯ ವೇಳೆ ರಾಜ್ಯ ರಾಜಕೀಯದ ಪ್ರಮುಖ ಬದಲಾವಣೆಗಳ ಕುರಿತು ಗಂಭೀರ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ಬಣ ಈಗ ಹೈಕಮಾಂಡ್ ಮುಂದೆ ಹೊಸ ಬೇಡಿಕೆಗಳನ್ನು ಇಡಲು ನಿರ್ಧರಿಸಿದೆ. ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೇರುವುದು ಹಾಗೂ ಸಂಪುಟ ಪುನಾರಚನೆಗೆ ಸೂಕ್ತ ಮುಹೂರ್ತ ನಿಗದಿಪಡಿಸುವಂತೆ ಮನವಿ ಮಾಡಲು ಸಿದ್ಧತೆ ನಡೆಸಲಾಗಿದೆ. ದೆಹಲಿ ಮಟ್ಟದ ಪ್ರಭಾವವನ್ನು ಬಳಸಿ ತನ್ನ ಹಿಡಿತವನ್ನು ಸಾಧಿಸಲು ಸಿದ್ಧವಾಗಿರುವ ಈ ತಂಡವು, ಮುಂಬರುವ ಪಂಚರಾಜ್ಯ ಚುನಾವಣಾ ಫಲಿತಾಂಶದ ನಂತರ ದೆಹಲಿಯಿಂದ ಬರಬಹುದಾದ ಬುಲಾವ್‌ಗಾಗಿ ಕಾದು ನೋಡುತ್ತಿದೆ. ಆ ಬಳಿಕ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಸಂಚಲನ ಮೂಡುವ ಸಾಧ್ಯತೆಗಳಿವೆ.




