ಫುಡ್​​ಸುದ್ದಿ

ರಾಜಮನೆತನದ ರಾಯಲ್ ಸಮೋಸ: 500 ವರ್ಷಗಳ ಹಳೆಯ ‘ರುಚಿಯ ಪುಸ್ತಕ’ದಲ್ಲಿದೆ ಅಸಲಿ ರಹಸ್ಯ!

ಭಾರತೀಯರ ಸಾರ್ವಕಾಲಿಕ ನೆಚ್ಚಿನ ತಿಂಡಿಗಳಲ್ಲಿ ಸಮೋಸ ಮೊದಲ ಸ್ಥಾನದಲ್ಲಿದೆ. ಸಂಜೆಯ ಮಳೆಯಲ್ಲಿ ಚಹಾದೊಂದಿಗೆ ಬಿಸಿಬಿಸಿಯಾದ ಆಲೂಗಡ್ಡೆ ತುಂಬಿದ ಸಮೋಸ ಸವಿಯುವುದೇ ಒಂದು ಅದ್ಭುತ ಅನುಭವ. ಇತ್ತೀಚಿನ ದಿನಗಳಲ್ಲಿ ಆಲೂಗಡ್ಡೆ ಇಲ್ಲದ ಸಮೋಸವನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ನಾವು ಇಂದು ತಿನ್ನುವ ಸಮೋಸಕ್ಕೂ ಅಂದಿನ ಸಮೋಸಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು ಎಂಬ ರೋಚಕ ಸತ್ಯ ಬಯಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಕ್ಬರ್ ಕಾಲದ ಅಥವಾ ಹಳೆಯ ರಾಜಮನೆತನದ ಸಮೋಸ ರೆಸಿಪಿ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ.

ಇತಿಹಾಸಕಾರ ಡಾ. ಎಂ.ಎಫ್. ಖಾನ್ ಅವರು ‘ಎಕ್ಸ್’ (X) ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 16ನೇ ಶತಮಾನದ ‘ನಿಮತನಮಾ’ ಅಥವಾ “ರುಚಿಯ ಪುಸ್ತಕ” ಎಂಬ ಪರ್ಷಿಯನ್ ಹಸ್ತಪ್ರತಿಯಲ್ಲಿ ಈ ವಿಶಿಷ್ಟ ಸಮೋಸದ ಉಲ್ಲೇಖವಿದೆ. ಮಧ್ಯ ಭಾರತದ ಮಾಂಡು ಸುಲ್ತಾನರಿಗಾಗಿ ಸಿದ್ಧಪಡಿಸಲಾದ ಈ ಪುಸ್ತಕದಲ್ಲಿ ಅಂದಿನ ರಾಜಮನೆತನದ ಸಮೋಸ ರೆಸಿಪಿಯನ್ನು ವಿವರಿಸಲಾಗಿದೆ. ವಿಶೇಷವೆಂದರೆ, ನಾವು ಇಂದು ಸಮೋಸದ ಪ್ರಮುಖ ಅಂಶ ಎಂದು ಭಾವಿಸುವ ಆಲೂಗಡ್ಡೆ ಮತ್ತು ಹಸಿಮೆಣಸಿನಕಾಯಿ ಆ ಕಾಲದ ಸಮೋಸದಲ್ಲಿ ಇರುತ್ತಿರಲಿಲ್ಲ. ಇದಕ್ಕೆ ಕಾರಣವೆಂದರೆ ಭಾರತಕ್ಕೆ ಆಲೂಗಡ್ಡೆ ಮತ್ತು ಮೆಣಸಿನಕಾಯಿ ಪರಿಚಯವಾಗಿದ್ದೇ ಬಹಳ ತಡವಾಗಿ.

ಆ ಕಾಲದ ರಾಜಮನೆತನದ ಸಮೋಸದಲ್ಲಿ ಆಲೂಗಡ್ಡೆ ಬದಲಿಗೆ ಚೆನ್ನಾಗಿ ಬೇಯಿಸಿದ ಮಾಂಸದ ಕೀಮಾ, ಸಣ್ಣಗೆ ಹೆಚ್ಚಿದ ಈರುಳ್ಳಿ, ಒಣ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬಳಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ಈ ಮಿಶ್ರಣಕ್ಕೆ ಗುಲಾಬಿ ನೀರಿನಲ್ಲಿ ನೆನೆಸಿದ ಕೇಸರಿ ಮತ್ತು ಬದನೆಕಾಯಿಯ ತಿರುಳನ್ನು ಸೇರಿಸಿ ಅದರ ರುಚಿಯನ್ನು ಹೆಚ್ಚಿಸಲಾಗುತ್ತಿತ್ತು. ಈ ಮಸಾಲೆಯನ್ನು ಹಿಟ್ಟಿನೊಳಗೆ ತುಂಬಿ, ಎಣ್ಣೆಯ ಬದಲಿಗೆ ಪರಿಶುದ್ಧವಾದ ತುಪ್ಪದಲ್ಲಿ ಕರಿಯಲಾಗುತ್ತಿತ್ತು. ಇದು ಕೇವಲ ರುಚಿಯಷ್ಟೇ ಅಲ್ಲದೆ, ರಾಜವಂಶದ ವಿಲಾಸಿ ಜೀವನದ ಸಂಕೇತವೂ ಆಗಿತ್ತು.

ಸಮೋಸದ ಒಳಭಾಗದ ಮಸಾಲೆ ಮಾತ್ರವಲ್ಲದೆ, ಹೊರಪದರದ ಹಿಟ್ಟು ಕೂಡ ಇಂದಿನ ಮೈದಾ ಹಿಟ್ಟಿಗಿಂತ ಭಿನ್ನವಾಗಿತ್ತು. ಅಂದು ದಪ್ಪ ಹಿಟ್ಟು, ನುಣುಪಾದ ಹಿಟ್ಟು ಮತ್ತು ಸಂಸ್ಕರಿಸದ ಹಿಟ್ಟು ಎಂಬ ಮೂರು ವಿಧದ ಹಿಟ್ಟುಗಳನ್ನು ಬಳಸಿ ಸಮೋಸ ತಯಾರಿಸಲಾಗುತ್ತಿತ್ತು. ಈ ಪುರಾತನ ರೆಸಿಪಿಯು ಸಮೋಸದ ವಿಕಾಸದ ಹಾದಿಯನ್ನು ತೋರಿಸುವುದಲ್ಲದೆ, ಭಾರತೀಯ ಆಹಾರ ಪದ್ಧತಿಯಲ್ಲಿ ಕಾಲಕ್ರಮೇಣ ಆದ ಬದಲಾವಣೆಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಇಂದು ಆಲೂಗಡ್ಡೆ ಸಮೋಸ ಪ್ರಸಿದ್ಧವಾಗಿದ್ದರೂ, ಮಾಂಸ ಮತ್ತು ಕೇಸರಿ ಬೆರೆತ ಆ ಹಳೆಯ ಕಾಲದ ಸಮೋಸದ ರುಚಿಯೇ ಬೇರೆಯಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.

Comments (0)

Your email address will not be published. Required fields are marked *

Back to top button