ರಾಯಚೂರಿನಲ್ಲಿ ವರ್ಷದ ಮೊದಲ ಮಳೆಗೆ ಸಿಡಿಲು ಬಡಿದು ಕುರಿಗಾಹಿ ಬಲಿ..!

ರಾಯಚೂರು : ಯುಗಾದಿ ಸಂಭ್ರಮದ ಹೊತ್ತಲ್ಲೇ ರಾಯಚೂರು ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಕಾದಿದ್ದ ಇಳೆಗೆ ತಂಪು ನೀಡಿದೆ. ಆದರೆ, ಈ ವರುಣನ ಆಗಮನವು ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಒಂದು ಕುಟುಂಬದ ಪಾಲಿಗೆ ಕತ್ತಲಾಗಿ ಪರಿಣಮಿಸಿದೆ. ಕುರಿ ಮೇಯಿಸಲು ಹೋಗಿದ್ದ 23 ವರ್ಷದ ಯುವ ಕುರಿಗಾಹಿ ಮಂಜುನಾಥ್ ಎಂಬುವವರು ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತ ಮಂಜುನಾಥ್ ಮಂಗಳವಾರ ರಾತ್ರಿ ಎಂದಿನಂತೆ ತಮ್ಮ ಕುರಿಗಳೊಂದಿಗೆ ಜಮೀನಿನಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಸುಮಾರು 9:30ರ ಸುಮಾರಿಗೆ ಇದ್ದಕ್ಕಿದ್ದಂತೆ ಗುಡುಗು ಮತ್ತು ಮಿಂಚಿನೊಂದಿಗೆ ಮಳೆ ಆರಂಭವಾಗಿದ್ದು, ಭೀಕರ ಸಿಡಿಲಿನ ಹೊಡೆತಕ್ಕೆ ಸಿಲುಕಿದ ಮಂಜುನಾಥ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೊದಲ ಮಳೆಯ ಸಂತಸದ ನಡುವೆಯೇ ಸಂಭವಿಸಿದ ಈ ಸಾವು ಗ್ರಾಮಸ್ಥರಲ್ಲಿ ಆತಂಕ ಮತ್ತು ನೋವನ್ನುಂಟು ಮಾಡಿದೆ.
ಜಿಲ್ಲೆಯ ವಿವಿಧೆಡೆ ಸುರಿದ ವರ್ಷದ ಮೊದಲ ಮಳೆಯು ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ತಾತ್ಕಾಲಿಕ ನೆಮ್ಮದಿ ನೀಡಿದರೂ, ಸಿಡಿಲಿನ ಅಬ್ಬರವು ಗ್ರಾಮೀಣ ಭಾಗದ ಜನರಲ್ಲಿ ದಿಗಿಲು ಹುಟ್ಟಿಸಿದೆ. ಸಿಡಿಲಿನ ಅನಾಹುತಕ್ಕೆ ಬಲಿಯಾದ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.