bengaluruಜಿಲ್ಲೆ

ಸಿನಿಮಾ ಮಾದರಿಯ ದರೋಡೆ; ಐವರು ಅಂತರಾಜ್ಯ ದರೋಡೆಕೋರರ ಬಂಧನ!

ಬೆಂಗಳೂರು: ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸಿನಿಮಾ ಶೈಲಿಯಲ್ಲಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಕುಖ್ಯಾತ ಗ್ಯಾಂಗ್‌ ಅನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಉಡಾನ್ ಕಂಪನಿಯ ಹಣವನ್ನು ಸಂಗ್ರಹಿಸಿ ಸಾಗಿಸುತ್ತಿದ್ದ ಶ್ರೀ ಕೈಲಾಸ್ ಎಂಬುವವರನ್ನು ಗುರಿಯಾಗಿಸಿಕೊಂಡು ಈ ದರೋಡೆ ನಡೆಸಲಾಗಿತ್ತು. ಬಂಧಿತ ಆರೋಪಿಗಳನ್ನು ನಿಖಿಲ್, ಪ್ರಶಾಂತ್ ಅಲಿಯಾಸ್‌ ಪಿಂಕಿ, ಅರುಣ್ ಕುಮಾರ್, ಹರೀಶ್ ಮತ್ತು ರಕ್ಷಿತ್ ಎಂದು ಗುರುತಿಸಲಾಗಿದ್ದು, ಅವರಿಂದ 10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕೃತ್ಯದ ಹಿಂದೆ ಅದೇ ಕಂಪನಿಯ ಸಿಬ್ಬಂದಿಯೇ ಮಾಸ್ಟರ್ ಮೈಂಡ್ ಆಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಫೆಬ್ರವರಿ 1 ರಂದು ಕೈಲಾಸ್ ಅವರು ಒಟ್ಟು 31,38,625 ರೂಪಾಯಿ ಹಣವನ್ನು ಸಂಗ್ರಹಿಸಿ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದ ದರೋಡೆಕೋರರ ತಂಡ ಲಾಂಗ್‌ನಿಂದ ಹಲ್ಲೆ ನಡೆಸಿ ಹಣದೊಂದಿಗೆ ಪರಾರಿಯಾಗಿತ್ತು. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

ಪೊಲೀಸರ ವಿಚಾರಣೆಯ ವೇಳೆ ಉಡಾನ್ ಕಂಪನಿಯ ಉದ್ಯೋಗಿ ರಕ್ಷಿತ್ ನೀಡಿದ ಮಾಹಿತಿಯ ಆಧಾರದ ಮೇಲೆ ಇಡೀ ಜಾಲ ಬಯಲಾಗಿದೆ. ಕೈಲಾಸ್ ಅವರು ಪ್ರತಿದಿನ ಹಣ ಸಂಗ್ರಹಿಸುವ ವಿಚಾರ ರಕ್ಷಿತ್‌ಗೆ ತಿಳಿದಿತ್ತು. ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ರಕ್ಷಿತ್ ತನ್ನ ಸ್ನೇಹಿತರೊಂದಿಗೆ ಸೇರಿ ಈ ದರೋಡೆಗೆ ಸಂಚು ರೂಪಿಸಿದ್ದನು. ಯೋಜನೆಯಂತೆಯೇ ಕೈಲಾಸ್ ಅವರನ್ನು ಅಡ್ಡಗಟ್ಟಿ ಹಣ ಲೂಟಿ ಮಾಡಲಾಗಿತ್ತು.

ಡಿವೈಎಸ್ಪಿ ಮೋಹನ್ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಕೃಷ್ಣಕುಮಾರ್ ಮತ್ತು ಮಂಜುನಾಥ್ ಅವರ ನೇತೃತ್ವದ ತಂಡವು ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಉಳಿದ ಹಣದ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Comments (0)

Your email address will not be published. Required fields are marked *

Back to top button